×
Ad

ಸರ್ಜನ್ ಲಭ್ಯವಿಲ್ಲದ್ದಕ್ಕೆ ತುರ್ತು ಶಸ್ತ್ರಚಿಕಿತ್ಸೆ ಮಾಡಿದ ಶಾಸಕ !

Update: 2017-02-24 09:13 IST

ಗುವಾಹತಿ, ಫೆ.24: ಮಹಿಳೆಯೊಬ್ಬರಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ವೇಳೆ ಶಸ್ತ್ರಚಿಕಿತ್ಸಕ ವೈದ್ಯರು ಲಭ್ಯರಿಲ್ಲದ ಕಾರಣ ಶಾಸಕರೇ ಶಸ್ತ್ರಚಿಕಿತ್ಸೆ ನೆರವೇರಿಸಿದ ಅಪರೂಪದ ಘಟನೆ ಇಂಫಾಲದಲ್ಲಿ ನಡೆದಿದೆ.

ಇಂಫಾಲ ಪ್ರಾದೇಶಿಕ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿದ್ದ ಡಾ.ಕೆ.ಬೀಚುವಾ, ಮಿಜೋರಾಂ ಶಾಸಕರೂ ಹೌದು. ಸೈಹಾ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ತರಬೇತಿಗೆ ತೆರಳಿದ್ದ ವೇಳೆ ತುರ್ತು ಶಸ್ತ್ರಚಿಕಿತ್ಸೆಯನ್ನು ಶಾಸಕರೇ ನಿರ್ವಹಿಸಿದರು.

"ನನ್ನ ಕ್ಷೇತ್ರದ 35 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಬಂತು. ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದೆ. ಮಹಿಳೆಯ ಹೊಟ್ಟೆಯಲ್ಲಿ ದೊಡ್ಡ ರಂಧ್ರವಾಗಿದ್ದು, ಆ ಕ್ಷಣದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸದಿದ್ದರೆ, ಆಕೆ ಸಾಯುವ ಅಪಾಯವಿತ್ತು" ಎಂದು ಬೀಚುವಾ ಹೇಳಿದ್ದಾರೆ. ವಿಷಯ ತಿಳಿದ ತಕ್ಷಣ ತಮ್ಮ ಎಲ್ಲ ರಾಜಕೀಯ ಕಾರ್ಯಕ್ರಮಗಳನ್ನು ರದ್ದುಮಾಡಿ ಆಸ್ಪತ್ರೆಗೆ ಧಾವಿಸಿ, ಶಸ್ತ್ರಚಿಕಿತ್ಸೆ ನೆರವೇರಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಮಹಿಳೆ ಈಗ ಆರೋಗ್ಯದಿಂದಿದ್ದಾರೆ. ಗುರುವಾರ ಆಕೆಯನ್ನು ಭೇಟಿ ಮಾಡಿದಾಗ ಆಕೆ ನಗುತ್ತಿದ್ದರು ಎಂದು ಬಿಚೂವಾ ಹೇಳಿಕೊಂಡಿದ್ದಾರೆ. 52 ವರ್ಷ ವಯಸ್ಸಿನ ಶಾಸಕ 1991ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದರು. ಮಿಜೋ ನ್ಯಾಷನಲ್ ಫ್ರಂಟ್‌ಗೆ 2013ರಲ್ಲಿ ಸೇರ್ಪಡೆಯಾಗುವ ಮುನ್ನ 20 ವರ್ಷ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ವೃತ್ತಿಬದುಕಿನಲ್ಲಿ ನೂರಾರು ಶಸ್ತ್ರಚಿಕಿತ್ಸೆ ನೆರವೇರಿಸಿದ್ದೆ. ಆದರೆ 2013ರಲ್ಲಿ ಶಾಸಕನಾಗಿ ಆಯ್ಕೆಯಾದ ಬಳಿಕ ಯಾವ ಶಸ್ತ್ರಚಿಕಿತ್ಸೆಯನ್ನೂ ನೆರವೇರಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಾ.ಬೀಚುವಾ ಅವರ ಪತ್ನಿ ಕೂಡಾ ವೈದ್ಯೆಯಾಗಿದ್ದು, ಇವರು ಸೈಹಾದಿಂದ 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 2013ರಲ್ಲಿ ಎಂಎನ್‌ಎಫ್ ಟಿಕೆಟ್‌ನಿಂದ ಸ್ಪರ್ಧಿಸಿದ ಇವರು, ಕಾಂಗ್ರೆಸ್ ಶಾಸಕ ಎಸ್.ಹೈಟೊ ಅವರನ್ನು 222 ಮತಗಳಿಂದ ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News