ಜಮ್ಮು- ಕಾಶ್ಮೀರ: ಉಗ್ರರ ಜತೆ ಸೇರುವ ಸ್ಥಳೀಯರ ಸಂಖ್ಯೆ ಹೆಚ್ಚಳ
ಹೊಸದಿಲ್ಲಿ, ಫೆ.24: ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆಯಿಂದ ಆಕ್ರೋಶಗೊಂಡಿರುವ ಬಹಳಷ್ಟು ಮಂದಿ ಸ್ಥಳೀಯರು ಉಗ್ರಗಾಮಿ ಸಂಘಟನೆಗಳನ್ನು ಸೇರುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಗುರುವಾರ ಸೋಫಿಯಾನ್‌ನಲ್ಲಿ ಸೇನಾ ಶಿಬಿರದ ಮೇಲೆ ಸೇನೆಯ ಕಾರ್ಯಾಚರಣೆ ಮಾದರಿಯಲ್ಲೇ ದಾಳಿ ನಡೆಸಿ ಮೂವರು ಸೈನಿಕರನ್ನು ಹತ್ಯೆ ಮಾಡಿದ ಘಟನೆ ಬಗ್ಗೆ ತನಿಖೆ ನಡೆಸುವ ವೇಳೆ ಈ ಅಂಶ ಬಹಿರಂಗವಾಗಿದೆ. ರಾಜ್ಯದಲ್ಲಿ ಉಗ್ರಗಾಮಿಗಳ ಸಂಖ್ಯೆ ಹೆಚ್ಚುತ್ತಿರುವುದು ಭದ್ರತಾ ಪಡೆಗಳ ಅಂದಾಜಿನಲ್ಲೇ ದೃಢಪಟ್ಟಿದೆ.
"ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ನಡೆಸಿದ ದಾಳಿ ಇದಾಗಿಯದೇ ವಿನಃ ಪೂರ್ವಯೋಜಿತ ದಾಳಿಯಲ್ಲ" ಎಂದು ಅಧಿಕಾರಿಗಳು ಗುರುವಾರದ ದಾಳಿಯ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ. ಆದರೆ ಗುರುವಾರ ನಸುಕಿನಲ್ಲಿ ನಡೆದ ಈ ದಾಳಿಯಲ್ಲಿ ಮೂವರು ಸೈನಿಕರು ಮೃತಪಟ್ಟದ್ದಲ್ಲದೇ, ಸೇನೆಯ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ. ವಿವಿಧ ಭಾಗಗಳಿಂದ ಉಗ್ರರು ಸಂಘಟಿತ ದಾಳಿ ನಡೆಸಿರುವುದು ಘಟನೆಯಲ್ಲಿ ದೃಢಪಟ್ಟಿದೆ. ಗುಪ್ತಚರ ವಿಭಾಗದ ವರದಿ ಬಗ್ಗೆಯೂ ಹಲವು ಸಂಶಯಗಳು ಎದ್ದಿದ್ದು, ಉಗ್ರರ ಇರುವಿಕೆ ಬಗೆಗಿನ ವರದಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಒಂದು ಗ್ರಾಮದ ಮೇಲೆ ದಾಳಿ ನಡೆಸಲು ತೆರಳಿದ್ದರು. ಆದರೆ ಅಲ್ಲಿಂದ ಬಳಿಕ ಬೇಗೆ ಗ್ರಾಮದತ್ತ ಗುರಿ ಮಾಡಿದರು. ಇದು ಕೂಡಾ ಉಗ್ರಸಂಘಟನೆಗಳ ಪರ ಒಲವು ಹೊಂದಿದವರ ತಂತ್ರ ಇರಬಹುದು ಎಂಬ ಗುಮಾನಿ ಹುಟ್ಟಿಕೊಂಡಿದೆ.
ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರೇ ಗುರುವಾರ ಸಂಜೆ ಶ್ರೀನಗರಕ್ಕೆ ಆಗಮಿಸಿದ್ದು, ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಆದರೆ ಸೇನೆಯ ಉತ್ತರ ಕಮಾಂಡ್ ಈ ಬಗ್ಗೆ ಹೇಳಿಕೆ ನೀಡಿ, ಇಂಥ ಘಟನೆಯಿಂದ, ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿ ಕೃತ್ಯಗಳ ವಿರುದ್ಧ ಕಾಶ್ಮೀರ ಕಣಿವೆಯಲ್ಲಿ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲು ದಾರಿಯಾಗಿದೆ ಎಂದು ಹೇಳಿದೆ.
ಅಧಿಕಾರಿಗಳ ಅಂದಾಜಿನಂತೆ ಜಮ್ಮು- ಕಾಶ್ಮೀರದಲ್ಲಿ ಸದ್ಯಕ್ಕೆ 450 ಉಗ್ರಗಾಮಿಗಳು ಇದ್ದಾರೆ ಎಂದು ಅಂದಾಜು ಮಾಡಲಾಗಿದೆ. ಬಹುತೇಕ ಮಂದಿ ಸಕ್ರಿಯರಾಗಿದ್ದು, ಈ ಪೈಕಿ 360 ಮಂದಿ ಪಿರ್ ಪಂಜಾಲ್‌ನ ಉತ್ತರ ಅಥವಾ ಕಾಶ್ಮೀರದಲ್ಲಿ ಇದ್ದಾರೆ ಎಂದು ಅಂದಾಜು ಮಾಡಲಾಗಿದೆ.