ತಮಿಳುನಾಡಿನಲ್ಲಿ ದೀಪಾ ಜಯಕುಮಾರ್‌ ಹೊಸ ಪಕ್ಷ

Update: 2017-02-24 05:46 GMT

 ಚೆನ್ನೈ, ಫೆ.24: ತಮಿಳುನಾಡಿನ ರಾಜಕೀಯಕ್ಕೆ ಹೊಸ ಪಕ್ಷವೊಂದು ಸೇರ್ಪಡೆಗೊಂಡಿದ್ದು, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಸೋದರನ ಮಗಳು ದೀಪಾ ಜಯಕುಮಾರ್‌ ಹೊಸ ಪಕ್ಷ ಸ್ಥಾಪಿಸಿದ್ದಾರೆ.
ಜಯಲಲಿತಾ ಅವರ ಜನ್ಮದಿನವಾಗಿರುವ ಇಂದು ದೀಪಾ ತನ್ನ ಮನೆಯಲ್ಲಿ ಬೆಳಗ್ಗೆ ಹೊಸ ಪಕ್ಷದ ಕಚೇರಿ ಉದ್ಘಾಟಿಸಿದರು. ಸಂಜೆ ನೂತನ  ಪಕ್ಷದ ಹೆಸರು ಪ್ರಕಟಿಸುವುದಾಗಿ  ಹೇಳಿದ್ದಾರೆ.
ಈ ನಡುವೆ ಜಯಲಲಿತಾ ಆಸ್ತಿಗಾಗಿ ಮಹಾ ಕದನ ಆರಂಭವಾಗುವ ಸೂಚನೆ ಲಭಿಸಿದ್ದು ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಜಯಲಲಿತಾ ಅವರ ಸೋದರಳಿಯ (ಸೋದರನ ಮಗ) ದೀಪಕ್ ಜಯಕುಮಾರ್ ಅವರು"ಪೋಯಸ್ ಗಾರ್ಡನ್ ಬಂಗಲೆ ಮತ್ತು ಇತರೆ ಆಸ್ತಿಗಳು  ನನಗೆ ಮತ್ತು ನನ್ನ ಸಹೋದರಿ ದೀಪಾಗೆ ಸೇರಿದ್ದು" ಎಂದು ತಿಳಿಸಿದ್ದಾರೆ.
 ಟಿವಿ ಚಾನಲೊಂದಕ್ಕೆ  ನೀಡಿದ ಸಂದರ್ಶನದಲ್ಲಿ ದೀಪಕ್ ಅವರು" ನಾನು ನಮ್ಮ ಅತ್ತೆ ಜಯಲಲಿತಾಗಾಗಿ 100 ಕೋಟಿ ರುಪಾಯಿ ದಂಡ ಕಟ್ಟುತ್ತೇನೆ. ನನ್ನ ಬಳಿ ಹಣ ಇಲ್ಲ. ಯಾವುದಾದರೂ ಆಸ್ತಿ ಮಾರಾಟ ಮಾಡುತ್ತೇನೆ. ಅದು ಯಾವ ಅಸ್ತಿ ಅಂತ ಮಾತ್ರ ಹೇಳಲ್ಲ.  ಜಯಲಲಿತಾ ಅವರ ಆಸ್ತಿಯಲ್ಲಿ ಬೇರೆ ಯಾರೂ  ಮಾಲೀಕತ್ವ ಸ್ಥಾಪಿಸಲು ಸಾಧ್ಯವಿಲ್ಲ. ನಾನು ಹಾಗೂ ದೀಪಾ ಮಾತ್ರ  ಅತ್ತೆ ಜಯಲಲಿತಾ ಆಸ್ತಿಗೆ ಹಕ್ಕುದಾರರು " ಎಂದು ಸ್ಪಷ್ಟಪಡಿಸಿದ್ದಾರೆ.
"ನನಗೆ ಯಾವುದೇ ರಾಜಕಿಯ ಉದ್ದೇಶಗಳೇನಿಲ್ಲ. ಶಶಿಕಲಾ ಅವರನ್ನು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಒಪ್ತೀನಿ. ಆದರೆ ದಿನಕರನ್ ಹಾಗೂ ವೆಂಕಟೇಶ್ ಗೆ ಪ್ರಮುಖ ಸ್ಥಾನಗಳನ್ನು ನೀಡಿರುವುದನ್ನು  ಒಪ್ಪಲು ಸಾಧ್ಯವಿಲ್ಲ. ದಿನಕರನ್ ಬದಲಿಗೆ ಓ ಪನ್ನೀರ್ ಸೆಲ್ವಂಗೆ ಈ ಹುದ್ದೆ ನೀಡಬೇಕಿತ್ತು "ಎಂದು ದೀಪಕ್‌ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News