ಈಗ ಉ.ಪ್ರದೇಶದ ಎಸ್‌ಬಿಐ ಎಟಿಎಮ್‌ನಲ್ಲಿ 2,000 ರೂ.ಗಳ ನಕಲಿ ನೋಟುಗಳು ....!

Update: 2017-02-25 09:47 GMT

ಶಹಜಾನಪುರ,ಫೆ.25: ಇತ್ತೀಚಿಗಷ್ಟೇ ದಿಲ್ಲಿಯಲ್ಲಿ ಎಸ್‌ಬಿಐ ಎಟಿಎಂ 2,000 ರೂ.ಗಳ ನಕಲಿ ನೋಟುಗಳನ್ನು ನೀಡಿದ್ದು ಸುದ್ದಿಯಾಗಿತ್ತು. ಇದೀಗ ಇಲ್ಲಿಯ ಎಸ್‌ಬಿಐ ಎಟಿಎಂ 2,000 ರೂ.ಗಳ ನಕಲಿ ನೋಟನ್ನು ನೀಡಿ ಸದ್ದು ಮಾಡಿದೆ. ಸದ್ದು ಮಾಡಿದ್ದಷ್ಟೇ ಅಲ್ಲ, ಪ್ರತಿಭಟನೆಗೂ ಕಾರಣವಾಗಿದೆ.

ಶಹಜಾನಪುರದ ಜಲಾಲಾಬಾದ್ ಪ್ರದೇಶದ ಜ್ಯುವೆಲ್ಲರ್ ಅರವಿಂದ ಗುಪ್ತಾ ಅವರು ಎಸ್‌ಬಿಐ ಎಟಿಎಮ್‌ನಿಂದ 10,000 ರೂ.ಗಳನ್ನು ತೆಗೆದಿದ್ದು, ಯಂತ್ರವು 2,000 ರೂ.ಮುಖಬೆಲೆಯ ಐದು ನೋಟುಗಳನ್ನು ನೀಡಿತ್ತು. ಈ ಪೈಕಿ ಒಂದು ಅಸಲಿ ನೋಟಿನ ಸ್ಕಾನ್ ಮಾಡಲಾದ ಪ್ರತಿಯಾಗಿತ್ತು. ಪಕ್ಕದಲ್ಲಿಯೇ ಇರುವ ಬ್ಯಾಂಕಿನ ಶಾಖೆಗೆ ತೆರಳಿ ಈ ಬಗ್ಗೆ ತಿಳಿಸಿದಾಗ ತಮ್ಮ ಎಟಿಎಂ ನಕಲಿ ನೋಟು ನೀಡಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಅಲ್ಲಿಯ ಸಿಬ್ಬಂದಿಗಳು ಸಿದ್ಧರಿರಲಿಲ್ಲ. ಗುಪ್ತಾ ತಕ್ಷಣ ಸ್ಥಳೀಯ ಬ್ಯಾಂಕ್ ಗ್ರಾಹಕರನ್ನು ಕರೆಸಿಕೊಂಡು ಪ್ರತಿಭಟನೆ ನಡೆಸಿದ್ದಲ್ಲದೆ, ಪೊಲೀಸ್ ದೂರನ್ನೂ ದಾಖಲಿಸಿದ್ದಾರೆ.

ಈ ಎಟಿಎಮ್‌ಗೆ ಬ್ಯಾಂಕಿನ ಸಿಬ್ಬಂದಿಗಳೇ ಹಣ ತುಂಬುತ್ತಿದ್ದು, ನಕಲಿ ನೋಟು ಹೊರಬಂದಿರುವುದರಲ್ಲಿ ಅವರ ಪಾತ್ರವಿದೆ ಎಂದು ಗುಪ್ತಾ ಆರೋಪಿಸಿದ್ದಾರೆ.

ಬ್ಯಾಂಕಿನ ಮ್ಯಾನೇಜರ್ ಈ ಆರೋಪವನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News