×
Ad

ಶರಿಯಾ ಬ್ಯಾಂಕಿಂಗ್ ಕುರಿತು ಸರಕಾರದ ಪ್ರತಿಕ್ರಿಯೆಯ ವಿವರ ನೀಡುವಂತಿಲ್ಲ: ಆರ್‌ಬಿಐ

Update: 2017-02-27 22:05 IST

ಹೊಸದಿಲ್ಲಿ,ಫೆ.27: ಭಾರತದಲ್ಲಿ ಶರಿಯಾ ಬ್ಯಾಂಕಿಂಗ್ ಆರಂಭಿಸುವ ಕುರಿತು ತನ್ನ ವರದಿಗೆ ವಿತ್ತ ಸಚಿವಾಲಯದ ಉತ್ತರವನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಆರ್‌ಬಿಐ ತಿಳಿಸಿದೆ.

ಇಸ್ಲಾಮಿಕ್ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ ಆರ್‌ಬಿಐನ ಅಂತರ ಇಲಾಖಾ ತಂಡ (ಐಡಿಜಿ)ದ ಶಿಫಾರಸು ಕುರಿತು ವಿತ್ತ ಸಚಿವಾಲಯದ ಅಧೀನದ ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್)ಯು ಕಳುಹಿಸಿರುವ ಪತ್ರದ ಪ್ರತಿಯನ್ನು ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಕೋರಲಾಗಿತ್ತು.

ಮಾಹಿತಿ ಹಕ್ಕು ಕಾಯ್ದೆಯಡಿ ಈ ಪತ್ರವನ್ನು ಬಹಿರಂಗಗೊಳಿಸಬಹುದೇ ಎಂದು ಆರ್‌ಬಿಐ ಡಿಎಫ್‌ಎಸ್‌ನಿಂದ ಸ್ಪಷ್ಟನೆ ಕೋರಿತ್ತು.

ತಾನು ಬರೆದಿರುವ ಪತ್ರವು ಮಾಹಿತಿ ಹಕ್ಕು ಕಾಯ್ದೆಯ ಕಲಂ 8(1)(ಸಿ) ಅಡಿ ವಿನಾಯಿತಿ ಹೊಂದಿದೆ ಎಂದು ಡಿಎಫ್‌ಎಸ್ ತಿಳಿಸಿದೆ ಎಂದು ಆರ್‌ಬಿಐ ಆರ್‌ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ಹೇಳಿದೆ.

ಕಾಯ್ದೆಯ ಈ ಕಲಂ ಸಂಸತ್ತು ಅಥವಾ ರಾಜ್ಯ ಶಾಸಕಾಂಗದ ಹಕ್ಕುಚ್ಯುತಿಗೆ ಕಾರಣವಾಗುವ ಮಾಹಿತಿಯನ್ನು ಬಹಿರಂಗಗೊಳಿಸುವುದನ್ನು ನಿಷೇಧಿಸಿದೆ.

ಇಸ್ಲಾಮಿಕ್ ಅಥವಾ ಶರಿಯಾ ಬ್ಯಾಂಕಿಂಗ್ ಬಡ್ಡಿಯನ್ನು ವಿಧಿಸದಿರುವ ತತ್ತ್ವಗಳನ್ನು ಆಧರಿಸಿರುವ ಹಣಕಾಸು ವ್ಯವಸ್ಥೆಯಾಗಿದೆ. ಇಸ್ಲಾಮ ಧರ್ಮವು ಬಡ್ಡಿಯನ್ನು ನಿಷೇಧಿಸಿದೆ.

ದೇಶದಲ್ಲಿ ಶರಿಯಾಕ್ಕೆ ಅನುಗುಣವಾದ ಬಡ್ಡಿಮುಕ್ತ ಬ್ಯಾಂಕಿಂಗ್ ಅನ್ನು ಕ್ರಮೇಣ ಜಾರಿಗೊಳಿಸಲು ಸಾಂಪ್ರದಾಯಿಕ ಬ್ಯಾಂಕುಗಳಲ್ಲಿ ‘ಇಸ್ಲಾಮಿಕ್ ಗವಾಕ್ಷಿ ’ಯನ್ನು ಆರಂಭಿಸುವ ಬಗ್ಗೆ ಆರ್‌ಬಿಐ ಈ ಹಿಂದೆ ಪ್ರಸ್ತಾಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News