ಈ ಯುವರಾಜನ ಬಗ್ಗೆ ತಿಳಿದರೆ ಸಖೇದಾಶ್ಚರ್ಯ ಪಡುತ್ತೀರಿ
ಅಲಹಾಬಾದ್, ಫೆ.28: ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಗಡಿ ಭಾಗದಲ್ಲಿರುವ ಚಿತ್ರಕೂಟದಲ್ಲಿ ನಡೆಯುತ್ತಿರುವ ಗ್ರಾಮೋದಯ ಮೇಳದಲ್ಲಿನ ತಾರಾಕರ್ಷಣೆ ಯಾವುದು ಗೊತ್ತೇ? ಯುವರಾಜ್ ಎಂಬ ಸೂಪರ್ ಕೋಣ. ಈ ಯುವರಾಜನಿಗೆ ದಿನಕ್ಕೆಷ್ಟು ಆಹಾರ ಬೇಕೆಂದು ತಿಳಿದಿದೆಯೇ-ಆತನಿಗೆ ದಿನಕ್ಕೆ 20 ಲೀಟರ್ ಹಾಲು, 10 ಕೆಜಿ ಹಣ್ಣುಗಳು ಮುಖ್ಯವಾಗಿ ಸೇಬು, 5 ಕೆಜಿ ಮೇವು ಹಾಗೂ 5 ಕೆಜಿ ಒಣ ಹುಲ್ಲು ನೀಡಲಾಗುತ್ತದೆ. ಪ್ರತಿ ದಿನ ಆತನನ್ನು ಐದು ಕಿಮೀ ದೂರದ ತನಕ ವಾಕಿಂಗ್ ಕೂಡ ಕರೆದೊಯ್ಯಲಾಗುತ್ತದೆ. ಈ ಯುವರಾಜನ ಬೆಲೆಯೆಷ್ಟು ಎಂದು ತಿಳಿದರೆ ತಲೆ ತಿರುಗುವುದೊಂದೇ ಬಾಕಿ. ಒಂಬತ್ತು ವರ್ಷದ ಆತನ ಬೆಲೆ ಬರೋಬ್ಬರಿ ರೂ 9.25 ಕೋಟಿ. ಆತನ ತೂಕ 15 ಕ್ವಿಂಟಾಲ್ ಆಗಿದ್ದು 5.8 ಅಡಿ ಉದ್ದ ಹಾಗೂ 11.5 ಅಡಿ ಅಗಲವಿದ್ದಾನೆ ಈತ.
ಯುವರಾಜನ ಮಾಲಕ ಕುರುಕ್ಷೇತ್ರದ ಕರಮ್ ವೀರ್ ಸಿಂಗ್ ಹೇಳುವಂತೆ ಯುವರಾಜ್ ಅವರ ಕುಟುಂಬ ಸದಸ್ಯನಿದ್ದಂತೆ. ತಾನು ಆತನನ್ನು ತನ್ನ ಮಗನಂತೆಯೇ ಬೆಳೆಸಿದ್ದೇನೆ ಎನ್ನುತ್ತಾರೆ ಅವರು. ದಿನವೊಂದಕ್ಕೆ ಯುವರಾಜನ ಅಗತ್ಯತೆಗಳಿಗೆ ಅವರು ರೂ.3,000ದಿಂದ ರೂ.4,000 ವೆಚ್ಚ ಮಾಡುತ್ತಾರೆ. ಈ ಕೋಣದ ವೀರ್ಯವನ್ನು ಕೃತಕ ಗರ್ಭಧಾರಣೆಗೂ ಉಪಯೋಗಿಸಲಾಗಿದೆ ಎಂದು ಅವರು ಮಾಹಿತಿ ನೀಡುತ್ತಾರೆ. ಯುವರಾಜನಿಂದ ಒಮ್ಮೆ ದೊರೆಯುವ ವೀರ್ಯದ ಪ್ರಮಾಣ 10ರಿಂದ 14 ಎಂಎಲ್ ಆಗಿದ್ದು ಇದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಅದರಿಂದ 700ರಿಂದ 900 ಡೋಸ್ ತಯಾರಿಸಲಾಗುತ್ತದೆ. ಕರಮ್ ವೀರ್ ತಮ್ಮ ಯುವರಾಜನಿಂದ ವಾರ್ಷಿಕ ರೂ.50 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆನ್ನಲಾಗಿದೆ.