ನಟಿಯ ವೀಡಿಯೊ ಇದೆಯೆನ್ನುವ ಫೇಸ್‌ಬುಕ್ ಪೋಸ್ಟ್: ಮಧ್ಯಪ್ರವೇಶಿಸಿದ ಸುಪ್ರೀಂಕೋರ್ಟು
ಹೊಸದಿಲ್ಲಿ,ಫೆ. 28: ಕೇರಳದ ನಟಿಗೆ ಕಿರುಕುಳ ನೀಡಿದ ವೀಡಿಯೊ ತನ್ನ ಬಳಿ ಇದೆ ಎನ್ನುವ ಫೇಸ್‌ಬುಕ್ ಪೋಸ್ಟ್ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಸುನೀತಾ ಕೃಷ್ಣನ್ ಸುಪ್ರೀಂಕೋರ್ಟಿಗೆ ದೂರು ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಪ್ರಚಾರ ನಡೆಸುವುದನ್ನು ನಿಷೇಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಅದರ ಬೆನ್ನಿಗೆ ಫೇಸ್‌ಬುಕ್‌ನಿಂದ ವಿವಾದಾತ್ಮಕ ಪೋಸ್ಟ್‌ನ್ನು ತೆಗೆಯಲಾಗಿದೆ.
ಪ್ರಾದೇಶಿಕ ಭಾಷೆಗಳ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಯಶಸ್ವಿಯಾಗಿ ತೆಗೆದು ಹಾಕುವ ವ್ಯವಸ್ಥೆಯನ್ನು ಜಾರಿಗೆ ತರುರು ಕುರಿತು ಪರಿಶೀಲಿಸಲಾಗುವುದು ಎಂದು ಜಸ್ಟಿಸ್ ಮದನ್ ಬಿ. ಲಾಕೂರ್, ಯು.ಯು. ಲಲಿತ್‌ರ ಪೀಠ ಹೇಳಿದೆ. ಲೈಂಗಿಕ ಕಿರುಕುಳದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳನ್ನು ಪ್ರಸಾರ ಮಾಡುವುದರ ವಿರುದ್ಧ ಸುನೀತಾ ಕೃಷ್ಣನ್‌ರ ಸಂಘಟನೆ ಪ್ರಜ್ವಲ ಸುಪ್ರೀಂಕೋರ್ಟಿಗೆ ದೂರು ಸಲ್ಲಿಸಿದೆ. ಅರ್ಜಿಯಲ್ಲಿ ಅಂತಿಮ ವಾದ ಆಲಿಕೆಯ ವೇಳೆ ಕೇರಳದಲ್ಲಿ ನಟಿಗೆ ಕಿರುಕುಳ ನೀಡಿದ ಘಟನೆಯನ್ನು ಅವರಿಗಾಗಿ ವಾದ ಮಂಡಿಸಿದ ಅಡ್ವೊಕೇಟ್ ಅಪರ್ಣಾ ಭಟ್ ಸುಪ್ರೀಂಕೋರ್ಟಿನ ಗಮನಕ್ಕೆ ತಂದಿದ್ದಾರೆ.
ನಟಿ ಆಕ್ರಮಣಕ್ಕೊಳಗಾದ ವಿಷಯವನ್ನು ಅಪರ್ಣಾ ಭಟ್ ಕಳೆದ ಬುಧವಾರ ಕೋರ್ಟಿನ ಗಮನಸೆಳೆದಿದ್ದರು. ನಟಿ ಕಿರುಕುಳಕ್ಕೊಳಗಾದ ದೃಶ್ಯಗಳನ್ನು ಪಡೆಯಲು ಸಂಪರ್ಕಿಸುವ ಫೋನ್‌ನಂಬರ್‌ನ್ನು ಕೂಡಾ ಫೇಸ್‌ಬುಕ್‌ನಲ್ಲಿ ಬರೆಯಲಾಗಿತ್ತು ಎಂದು ಅಡ್ವೊಕೇಟ್ ಅಪರ್ಣಾ ಕೋರ್ಟಿಗೆ ತಿಳಿಸಿದ್ದರು.
ಪ್ರಾದೇಶಿಕ ಭಾಷೆಯ ಪೋಸ್ಟ್‌ಗಳನ್ನು ಪರಿಶೀಲಿಸಲು ತಮ್ಮಲ್ಲಿ ವ್ಯವಸ್ಥೆ ಇದೆ ಎಂದು ಸಾಮಾಜಿಕ ಮಾಧ್ಯಮಗಳು ಹಕ್ಕುವಾದ ಮಂಡಿಸುತ್ತಿವೆಯಾದರೂ ಆ ಕುರಿತು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಪರ್ಣಾ ಭಟ್ ಕೋರ್ಟಿಗೆ ವಿವರಿಸಿದ್ದಾರೆ. ನಂತರ ಫೇಸ್‌ಬುಕ್‌ನಿಂದ ಕೋರ್ಟು ಈ ವಿಷಯದಲ್ಲಿ ವಿವರಣೆ ಕೇಳಿದೆ. ದೂರನ್ನು ಪರಿಶೀಲಿಸುವುದಾಗಿ ಫೇಸ್‌ಬುಕ್‌ಗಾಗಿ ಹಾಜರಾದ ವಕೀಲರು ಕೋರ್ಟಿಗೆ ತಿಳಿಸಿದ್ದಾರೆ. ಇದರ ಬೆನ್ನಿಗೆ ವಿವಾದಾತ್ಮಕ ಪ್ರೋಫೈಲ್ ಫೇಸ್‌ಬುಕ್‌ನಿಂದ ಅಪ್ರತ್ಯಕ್ಷಗೊಂಡಿದೆ ಎಂದು ವರದಿ ತಿಳಿಸಿದೆ.