×
Ad

ಕೇರಳ: ಸಿಲಿಂಡರಿಗೆ ಅಡುಗೆ ಅನಿಲ ತುಂಬುವುದರಲ್ಲಿ ಭಾರೀ ಅಕ್ರಮ

Update: 2017-02-28 12:23 IST

ಕೊಚ್ಚಿ,ಫೆ. 28: ಐಒಸಿ ಬಾಟ್ಲಿಂಗ್ ಪ್ಲಾಂಟ್‌ನಲ್ಲಿ ಸಿಲಿಂಡರಿಗೆ ಅಡುಗೆ ಅನಿಲ ತುಂಬಿಸುವುದರಲ್ಲಿ ಭಾರೀ ಅಕ್ರಮ ನಡೆದಿದೆ. ಬಾಟ್ಲಿಂಗ್ ಕಂಪೆನಿ ಬಳಕೆದಾರರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದೆ.  ಬಳಕೆದಾರರು ನಿರಂತರ ದೂರು ನೀಡಿದ ಆಧಾರದಲ್ಲಿ ಕಳೆದ ದಿವಸ ತೂಕ ಅಳತೆ ಇಲಾಖೆಯ ಬಾಟ್ಲಿಂಗ್ ಕಂಪೆನಿ ತುಂಬಿದ್ದ ಅಡುಗೆ ಅನಿಲದ ಸಿಲಂಡರ್‌ಗಳನ್ನು ತಪಾಸಣೆ ಮಾಡಿದ್ದು,ಕಂಪೆನಿ ಪ್ರತಿಯೊಂದು ಸಿಲಂಡರ್‌ನಲ್ಲಿ ಸರಾಸರಿ 180 ಗ್ರಾಂ ಅನಿಲವನ್ನು ಕಡಿಮೆ ತುಂಬಿಸಿದ್ದು ಪತ್ತೆಯಾಗಿದೆ. ಇನ್ನು ಕೆಲವು ಸಿಲಂಡರಿನಲ್ಲಿ 700 ಗ್ರಾಂ ಕಡಿಮೆತುಂಬಿಸಿದ್ದು ತಪಾಸಣೆ ವೇಳೆ ಗಮನಕ್ಕೆ ಬಂದಿದೆ.

ಐಒಸಿ ಕಂಪೆನಿ ನಡೆಸಿದ ವಂಚನೆ ಬಹಿರಂಗವಾದದ್ದರಿಂದ ಅಧಿಕಾರಿಗಳು ಅದಕ್ಕೆ 7.5 ಲಕ್ಷರೂಪಾಯಿ ದಂಡ ವಿಧಿಸಿದ್ದಾರೆ. ಈ ಕಂಪೆನಿ ತನ್ನ ಅಕ್ರಮವನ್ನು ಮುಂದುವರಿಸಿದರೆ ಹೆಚ್ಚಿನ ದಂಡನೆ ವಿಧಿಸಲಾಗುವುದು. ವಿಚಾರಣೆ ಮುಂತಾದ ಕಾನೂನು ಬದ್ಧವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಲೀಗಲ್ ಮೆಟ್ರೋಲಜಿ ರೀಜನಲ್ ಡೆಪ್ಯುಟಿ ಕಂಟ್ರೋಲರ್ ಆರ್. ರಾಮ್ ಮೋಹನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತೂಕ ಅಳತೆ ವಿಭಾಗದವರು ಸುಮಾರು ಏಳು ಗಂಟೆಯವರೆಗೆ ತಪಾಸಣೆ ನಡೆಸಿ ಅಕ್ರಮವನ್ನು ಬಯಲಿಗೆಳೆದಿದೆ. ಅಸಿಸ್ಟೆಂಟ್ ಕಂಟ್ರೋಲರ್ ಅನೂಪ್.ವಿ. ಉಮೇಶ್, ಜಯಕುಮಾರ್, ಕಂಟ್ರೋಲಿಂಗ್ ಇನ್ಸ್‌ಪೆಕ್ಟರ್ ವಿನೋಜ್, ಜಯನ್, ಸಾಬು, ಅಭಿಲಾಶ್ ನೇತೃತ್ವದಲ್ಲಿ ತಪಾಸಣೆ ನಡೆದಿದೆ. ಗಂಟೆಗೆ 2000 ಸಿಲಿಂಡರ್‌ಗಳನ್ನು ಪ್ಲಾಂಟ್‌ನಲ್ಲಿ ತುಂಬಲಾಗುತ್ತದೆ. ಮೂರು ಶಿಫ್ಟ್‌ಗಳಲ್ಲಿ 24 ಗಂಟೆಗಳ ಕಾಲಾವಧಿಯಲ್ಲಿ ಪ್ಲಾಂಟಿನಲ್ಲಿ ಅಡುಗೆ ಅನಿಲ ತುಂಬಿಸುವ ಕೆಲಸ ನಡೆಯುತ್ತಿದೆ. ಒಂದು ಸಿಲಿಂಡರ್‌ನಲ್ಲಿ14.2 ಕಿಲೊ ಅನಿಲ ಇರಬೇಕೆಂದು ನಿಯಮವಿದೆ. ಪ್ರತಿದಿವಸ 9000 ಕಿಲೊ ಅಕ್ರಮ ಐಒಸಿ ಪ್ಲಾಂಟ್‌ನಲ್ಲಿ ನಡೆದಿದೆ.

ಒಂದು ಸಿಲಿಂಡರ್ ಬೆಲೆ 600 ರೂಪಾಯಿ ಆಗಿದೆ. ಒಂದು ಕಿಲೊ ಅಡುಗೆ ಅನಿಲಕ್ಕೆ 42 ರೂಪಾಯಿ ಮಾರುಕಟ್ಟೆ ದರವಾಗಿದೆ. ಈ ಲೆಕ್ಕದಲ್ಲಿ ಪ್ರತಿದಿವಸ 3.85ಲಕ್ಷ ರೂಪಾಯಿಯ ವಂಚನೆ ನಡೆದಿದೆ. ಮುಂದಿನ ದಿವಸಗಳಲ್ಲಿ ಇತರ ಬಾಟ್ಲಿಂಗ್ ಪ್ಲಾಂಟ್‌ಗಳ ತಪಾಸಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News