ನಕ್ಸಲರ ಬಗ್ಗೆ ಸಹಾನುಭೂತಿ ಹೊಂದಿದ್ದ ಐವರಿಗೆ 10 ವರ್ಷ ಜೈಲು ಶಿಕ್ಷೆ
Update: 2017-02-28 19:43 IST
ಬಿಲಾಸ್‌ಪುರ, ಫೆ.28: ಮಾವೋವಾದಿ ನಕ್ಸಲೀಯರ ‘ಓಲೆಕಾರ’ರಂತೆ ಕಾರ್ಯನಿರ್ವಹಿಸಿ, ಅವರಿಗೆ ಅಗತ್ಯವಿರುವ ದೈನಂದಿನ ಬಳಕೆ ಸಾಮಾಗ್ರಿ, ಸ್ಫೋಟಕಗಳನ್ನು ಸರಬರಾಜು ಮಾಡುತ್ತಿದ್ದ ಆರೋಪದಡಿ ಐದು ಮಂದಿ ನಕ್ಸಲ್ ಪರ ಸಹಾನುಭೂತಿ ಹೊಂದಿರುವ ವ್ಯಕ್ತಿಗಳಿಗೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ವಿಶೇಷ ಎನ್‌ಐಎ ನ್ಯಾಯಾಲಯವೊಂದು 10 ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜೊತೆಗೆ ತಲಾ 500 ರೂ.ಗಳ ದಂಡವನ್ನೂ ವಿಧಿಸಲಾಗಿದೆ.
2013ರ ಆಗಸ್ಟ್ 25ರಂದು ರಾಜ್‌ಪುರದ ಶಂಕರ್‌ನಗರ ಪ್ರದೇಶದಲ್ಲಿ ಶರ್ಮ ಮತ್ತು ಕುಂಡು ಎಂಬ ಇಬ್ಬರನ್ನು ಬಂಧಿಸಿದ್ದ ಪೊಲೀಸರು ಇವರ ಬಳಿಯಿಂದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಇವರಿಬ್ಬರ ವಿಚಾರಣೆ ಬಳಿಕ ಶರ್ಮಾನ ಸಹಚರರಾದ ನರೇತಿ, ಧ್ರುವ ಮತ್ತು ವೈಷ್ಣವ್ ಎಂಬವರನ್ನು ವಶಕ್ಕೆ ಪಡೆಯಲಾಗಿತ್ತು. ಇವರು ಮಾವೋವಾದಿ ನಕ್ಸಲರ ಗ್ರಾಮೀಣ ಭಾಗದ ಸಂಪರ್ಕ ಸೇತುಗಳಂತೆ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.