ಅಖಿಲ ಭಾರತ ನ್ಯಾಯಾಂಗ ಸೇವೆ ರಚನೆ ಕಾನೂನು ಅಧಿಕಾರಿಗಳ ಸಲಹೆ ಕೇಳಿದ ಸರಕಾರ
ಹೊಸದಿಲ್ಲಿ, ಫೆ.28: ನ್ಯಾಯಾಂಗ ಮತ್ತು ರಾಜ್ಯ ಸರಕಾರಗಳ ನಡುವಿನ ಭಿನ್ನಾಭಿಪ್ರಾಯದ ಕಾರಣ 1960ರಿಂದಲೂ ನೆನೆಗುದಿಗೆ ಬಿದ್ದಿರುವ ಅಖಿಲ ಭಾರತ ನ್ಯಾಯಾಂಗ ಸೇವೆಯನ್ನು ರೂಪಿಸುವ ನಿಟ್ಟಿನಲ್ಲಿ ಸರಕಾರವು ತನ್ನ ಇಬ್ಬರು ಉನ್ನತ ಕಾನೂನು ಅಧಿಕಾರಿಗಳ ಸಲಹೆಯನ್ನು ಕೇಳಿದೆ.
ಐಎಎಸ್, ಐಪಿಎಸ್ ಸೇವೆಗಳ ರೀತಿಯಲ್ಲಿ ಅಖಿಲ ಭಾರತೀಯ ನ್ಯಾಯಾಂಗ ಸೇವೆಯನ್ನು ರೂಪಿಸುವ ಬಗ್ಗೆ ಇತ್ತೀಚೆಗೆ ಕಾನೂನು ಸಚಿವ ರವಿಶಂಕರ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಮತ್ತು ಸಾಲಿಸಿಟರ್ ಜನರಲ್ ರಣಜಿತ್ ಕುಮಾರ್ ಅವರ ಸಲಹೆಯನ್ನು ಪಡೆಯಲು ನಿರ್ಧರಿಸಲಾಗಿದೆ. ಸುದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದಿರುವ ಈ ವಿಷಯಕ್ಕೆ ಒಂದು ಪರಿಹಾರ ರೂಪಿಸಲು ನರೇಂದ್ರ ಮೋದಿ ಸರಕಾರ ಮುಂದಾಗಿದ್ದು , ಇದರಂತೆ ನ್ಯಾಯಾಂಗ ಸೇವೆಯಲ್ಲಿ ಕೆಳ ನ್ಯಾಯಾಂಗ ಇಲಾಖೆಗೆ ಪ್ರತ್ಯೇಕ ಪದವೃಂದ (ಕೇಡರ್) ರೂಪಿಸಲಾಗುವುದು.
ರಾಜ್ಯಗಳು, ದಂಡ ಪ್ರಕ್ರಿಯಾ ಸಂಹಿತೆ ಮತ್ತು ನಾಗರಿಕ ಪ್ರಕ್ರಿಯಾ ಸಂಹಿತೆಯಡಿ ತಮಗೆ ನೀಡಲಾಗಿರುವ ಅಧಿಕಾರವನ್ನು ಬಳಸಿಕೊಂಡು ಕಾನೂನನ್ನು ರೂಪಿಸಿದ್ದು ಅದರಂತೆ ಕೆಳಹಂತದ ನ್ಯಾಯಾಲಯಗಳಲ್ಲಿ ಆದೇಶಗಳನ್ನು ಕೂಡಾ ಸ್ಥಳೀಯ ಭಾಷೆಗಳಲ್ಲಿ ಬರೆಯಬೇಕು. ಆದರೆ ನ್ಯಾಯಾಂಗ ಸೇವೆಯಡಿ, ತಮಿಳುನಾಡಿನಿಂದ ಆಯ್ಕೆಯಾದ ವ್ಯಕ್ತಿಗೆ ಉತ್ತರಪ್ರದೇಶ ಅಥವಾ ಬಿಹಾರದಂತಹ ರಾಜ್ಯಗಳ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸಲು ಕಷ್ಟವಾಗಬಹುದು ಎಂಬ ವಾದ ಕೇಳಿಬರುತ್ತಿದೆ.
ಅಲ್ಲದೆ , ಅಖಿಲ ಭಾರತ ಸೇವೆಯು ರಾಜ್ಯ ನ್ಯಾಯಾಂಗ ಇಲಾಖೆಯ ಅಧಿಕಾರಿಗಳಿಗೆ ವೃತ್ತಿಜೀವನದಲ್ಲಿ ಮುನ್ನಡೆ ಅವಕಾಶಕ್ಕೆ ತಡೆಯೊಡ್ಡಬಹುದು ಎಂಬ ಅಭಿಪ್ರಾಯವೂ ಇದೆ.
ಅಖಿಲ ಭಾರತ ನಾಗರಿಕ ಸೇವೆಯ ರೀತಿಯಲ್ಲಿಯೇ ಅಖಿಲ ಭಾರತ ನ್ಯಾಯಾಂಗ ಸೇವೆಯನ್ನು ರೂಪಿಸುವ ಸರಕಾರದ ಆಶಯವನ್ನು ಕಾನೂನು ಆಯೋಗ ಬೆಂಬಲಿಸಿದೆ. ಅಲ್ಲದೆ ವೈಯಕ್ತಿಕ, ನಾಗರಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯ ವಿಷಯದ ಸಂಸದೀಯ ಸ್ಥಾಯಿ ಸಮಿತಿ ಕೂಡಾ ಸರಕಾರದ ನಿಲುವಿಗೆ ಬೆಂಬಲ ಸೂಚಿಸಿದೆ. 2006ರಲ್ಲಿ ಸರಕಾರಕ್ಕೆ ಸಲ್ಲಿಸಿದ ತನ್ನ 15ನೇ ವರದಿಯಲ್ಲಿ ಸಮಿತಿಯು, ಜಿಲ್ಲಾ ಮಟ್ಟದ ನ್ಯಾಯಾಧೀಶರ ನೇಮಕ ಸೇರಿದಂತೆ ಅಖಿಲ ಭಾರತ ನ್ಯಾಯಾಂಗ ಸೇವೆಯ ರೂಪೀಕರಣದ ನಿಟ್ಟಿನಲ್ಲಿ ಶೀಘ್ರ ಕಾರ್ಯೋನ್ಮುಖವಾಗುವಂತೆ ಸಲಹೆ ಮಾಡಿತ್ತು.
ಸರಕಾರದ ಬಹುತೇಕ ಇಲಾಖೆಗಳು ಅಖಿಲ ಭಾರತೀಯ ಸೇವಾ ನಿಯಮದಡಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರೆ ನ್ಯಾಯಾಂಗ ಇಲಾಖೆಯಲ್ಲಿ ಮಾತ್ರ ಸಿಬ್ಬಂದಿಗಳ ನೇಮಕಕ್ಕೆ ಅಖಿಲ ಭಾರತ ಮಟ್ಟದ ಆಯ್ಕೆ ಪ್ರಕ್ರಿಯೆ ಆಗುತ್ತಿಲ್ಲ. ಹೆಚ್ಚಿನ ಎಲ್ಲಾ ರಾಜ್ಯಗಳು ತಮ್ಮದೇ ಪ್ರತ್ಯೇಕ ರಾಜ್ಯಮಟ್ಟದ ನ್ಯಾಯಾಂಗ ಸೇವೆ ಆಯ್ಕೆ ಪ್ರಕ್ರಿಯೆ ನಡೆಸುತ್ತಿವೆ. ಅಖಿಲ ಭಾರತ ನ್ಯಾಯಾಂಗ ಸೇವೆಯನ್ನು ರೂಪಿಸುವ ಕುರಿತ ಸಲಹೆಯನ್ನು 1960ರಲ್ಲಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿತ್ತು.