×
Ad

ಕನ್ನಯ್ಯ ದೇಶವಿರೋಧಿ ಘೋಷಣೆ ಕೂಗಿಯೇ ಇಲ್ಲ: ತನಿಖೆಯಲ್ಲಿ ಕ್ಲೀನ್‌ಚಿಟ್

Update: 2017-03-01 11:20 IST

ಹೊಸದಿಲ್ಲಿ, ಮಾ.1: ಜೆಎನ್‌ಯು ವಿದ್ಯಾರ್ಥಿ ಕನ್ನಯ್ಯ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿಯೇ ಇಲ್ಲ ಎಂದು ತನಿಖೆಯಿಂದ ಸಾಬೀತಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಕನ್ನಯ್ಯಗೆ ಕ್ಲೀನ್‌ಚಿಟ್ ನೀಡಲಾಗಿದೆ.

 ವರ್ಷದ ಹಿಂದೆ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದಲ್ಲಿ ಜೆಎನ್‌ಯು ಭಾರೀ ಸುದ್ದಿಯಾಗಿತ್ತು. ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್ ವಿರುದ್ಧ ಕೇಳಿಬಂದಿದ್ದ ದೇಶದ್ರೋಹಿ ಆರೋಪವನ್ನು ಸಾಬೀತುಪಡಿಸಲು ಪೊಲೀಸರು ಸೂಕ್ತ ಪುರಾವೆ ಒದಗಿಸಲು ವಿಫಲರಾಗಿದ್ದಾರೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಜೆಎನ್‌ಯುನಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಕುಮಾರ್ ಧ್ವನಿ ಮಾದರಿಯ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ ಕುಮಾರ್ ಪಾಸಾಗಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ’ಇಂಡಿಯಾ ಟುಡೆ’ ತನ್ನ ವಿಶೇಷ ವರದಿಯಲ್ಲಿ ತಿಳಿಸಿದೆ.

ಜವಾಹರ್‌ಲಾಲ್ ನೆಹರೂ ಯುನಿವರ್ಸಿಟಿ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷರಾಗಿರುವ ಕನ್ನಯ್ಯ ಕುಮಾರ್ ಜೊತೆಗೆ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ವಿರುದ್ಧವೂ ದೇಶದ್ರೋಹ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿತ್ತು. ಈ ಮೂವರು ಶಿಸ್ತುಕ್ರಮವನ್ನು ಎದುರಿಸಿದ್ದರು. ಇನ್ನು ಕೆಲವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿತ್ತು. ಹೆಚ್ಚಿನ ವಿದ್ಯಾರ್ಥಿಗಳಿಗೆ ತಲಾ 20,000 ರೂ. ದಂಡ ಹಾಗೂ ಕುಮಾರ್‌ಗೆ 10,000 ರೂ. ದಂಡವನ್ನು ವಿಧಿಸಲಾಗಿತ್ತು.

 ತಾನು ಮುಗ್ಧ. ಏನೂ ತಪ್ಪು ಮಾಡಿಲ್ಲ ಎಂದು ಕುಮಾರ್ ಪ್ರತಿಪಾದಿಸುತ್ತಾ ಬಂದಿದ್ದರು. ಇದೀಗ ದಂಡಾಧಿಕಾರಿಯ ತನಿಖೆಯ ಬಳಿಕ ಅವರಿಗೆ ಕ್ಲೀನ್‌ಚಿಟ್ ಲಭಿಸಿದೆ.

 ದೇಶ ವಿರೋಧಿ ಘೋಷಣೆ ಕೂಗಿದವರಲ್ಲಿ 9 ಮಂದಿ ಹೊರಗಿನವರೆಂದು ಗುರುತಿಸಲಾಗಿದ್ದು, ಎಲ್ಲರೂ ಕಾಶ್ಮೀರದವರು. ಓರ್ವ ಪ್ರೊಫೆಸರ್ ಕೂಡ ಇದರಲ್ಲಿದ್ದರು. ಕುಮಾರ್ ಯಾವುದೇ ಘೋಷಣೆ ಕೂಗಿಲ್ಲ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಕುಮಾರ್ ದೇಶದ್ರೋಹ ಘೋಷಣೆ ಕೂಗಿದ್ದಕ್ಕೆ ಸಾಕಷ್ಟು ಪುರಾವೆ ಇದೆ ಎಂದು ದಿಲ್ಲಿ ಪೊಲೀಸ್ ಕಮಿಶನರ್ ಬಿ.ಎಸ್. ಬಸ್ಸಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರ ಪ್ರಕರಣದ ತನಿಖೆಗೆ ಮ್ಯಾಜಿಸ್ಟ್ರೇಟ್‌ರನ್ನು ನೇಮಕ ಮಾಡಿದ್ದು, ತನಿಖೆಯ ಬಳಿಕ ಕುಮಾರ್‌ಗೆ ಕ್ಲೀನ್‌ಚಿಟ್ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News