ತಮಿಳುನಾಡಿನಲ್ಲಿ ಹೊಸ ಕ್ರಾಂತಿ: ರಾಜ್ಯಾದ್ಯಂತ ಪೆಪ್ಸಿ, ಕೋಕ್ ಗಳನ್ನು ಕೈಬಿಟ್ಟು ಸ್ಥಳೀಯ ಪಾನೀಯಗಳ ಮಾರಾಟ ಶುರು

Update: 2017-03-01 06:58 GMT

ಚೆನ್ನೈ, ಮಾ.1: ಸ್ಥಳೀಯ ಪಾನೀಯಗಳ ಮಾರಾಟವನ್ನು ಉತ್ತೇಜಿಸುವ ಸಲುವಾಗಿ ತಮಿಳುನಾಡಿನಾದ್ಯಂತ ವರ್ತಕರು ಇಂದಿನಿಂದ ಪೆಪ್ಸಿ ಹಾಗೂ ಕೋಕಾ ಕೋಲಾಗಳನ್ನು ಬಹಿಷ್ಕರಿಸುತ್ತಿದ್ದಾರೆ. ಈ ಕ್ರಮದಿಂದ ಈ ಬಹುರಾಷ್ಟ್ರೀಯ ಕಂಪೆನಿಗಳು ರೂ 1,400 ಕೋಟಿಗೂ ಅಧಿಕ ನಷ್ಟವನ್ನುಭವಿಸಲಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯದ ಅತ್ಯಂತ ದೊಡ್ಡ ವರ್ತಕರ ಸಂಘಟನೆಯಾದ ತಮಿಳುನಾಡು ವಣಿಗರ್ ಸಂಗಮ್ ಈ ಬಹಿಷ್ಕಾರ ಕರೆ ನೀಡಿದ್ದು ಈ ಸಂಘಟನೆಯ ಅಡಿಯಲ್ಲಿ ಸುಮಾರು 6,000 ಸಣ್ಣ ಮತ್ತು ಮಾಧ್ಯಮ ಮಳಿಗೆಗಳು ಇವೆಯಲ್ಲದೆ ಸಂಘಟನೆಯಲ್ಲಿ 15ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ.

ಅದೇ ಸಮಯ ಸೂಪರ್ ಮಾರ್ಕೆಟುಗಳು ಹಾಗೂ ರೆಸ್ಟಾರೆಂಟುಗಳು ತಮಗೆ ಈ ನಿಷೇಧ ಜಾರಿಗೊಳಿಸಲು ಸಮಯ ಬೇಕೆಂದು ಕೇಳಿದ್ದರೂ ಅವರ ಪ್ರತಿನಿಧಿಗಳೊಂದಿಗೆ ವಣಿಗರ್ ಸಂಗಮ್ ಇಂದು ಸಂಜೆ ಸಭೆ ನಡೆಸಲಿದೆ.

ರಾಜ್ಯದಲ್ಲಿ ಕಳೆದ ತಿಂಗಳು ಜಲ್ಲಿಕಟ್ಟು ಪರ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಪೆಪ್ಸಿ ಮತ್ತು ಕೋಲಾಗಳ ಮೇಲೆ ನಿಷೇಧ ಹೇರುವ ಬೇಡಿಕೆ ಹೆಚ್ಚಾಗಿತ್ತು. ರಾಜ್ಯದಲ್ಲಿ ನೀರಿನ ಕೊರತೆಯಿರುವಾಗ ಈ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ನೀರು ಉಪಯೋಗಿಸುತ್ತಿವೆಯೆಂದು ಸಂಗಮ್ ಕಾರ್ಯದರ್ಶಿ ಕೆ ಮೋಹನ್ ದೂರಿದ್ದರು. ಈ ವಿದೇಶಿ ಕಂಪೆನಿಗಳ ಉತ್ಪನ್ನಗಳಿಗಿಂತ ಭಾರತೀಯ ಬ್ರ್ಯಾಂಡಿನ ತಂಪು ಪಾನೀಯಗಳ ದರಗಳು ಅಗ್ಗವಾಗಿದ್ದು, ವಿದೇಶಿ ಉತ್ಪನ್ನಗಳ ಬದಲು ತಾಜಾ ಹಣ್ಣಿನ ರಸಗಳನ್ನು ಸೇವಿಸಬಹುದು ಎಂದೂ ಅವರು ಹೇಳುತ್ತಾರೆ.

ಅಷ್ಟೇ ಅಲ್ಲದೆ ಈ ವಿದೇಶಿ ಕಂಪೆನಿಗಳು ಸಣ್ಣ ಮಾರಾಟಗಾರರ ಕಾಲೆಳೆಯುತ್ತವೆಯೆಂಬ ದೂರುಗಳೂ ಕೇಳಿ ಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News