ಜೇಟ್ಲಿ ಹಣಕಾಸು ದಾಖಲೆಗಳನ್ನು ಕೋರಿದ್ದ ಕೇಜ್ರಿವಾಲ್ ಅರ್ಜಿ ಹೈಕೋರ್ಟ್‌ನಲ್ಲಿ ತಿರಸ್ಕೃತ

Update: 2017-03-01 08:36 GMT

ಹೊಸದಿಲ್ಲಿ,ಮಾ.1: ತನ್ನ ವಿರುದ್ಧ ಮಾನನಷ್ಟ ಹೂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿಯವರ ಬ್ಯಾಂಕ್ ಖಾತೆಗಳು, ತೆರಿಗೆ ರಿಟರ್ನ್‌ಗಳು ಮತ್ತು ಇತರ ಹಣಕಾಸು ದಾಖಲೆಗಳನ್ನು ಕೋರಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ. ಅರ್ಜಿಯಲ್ಲಿ ಯಾವುದೇ ಹುರುಳು ಇಲ್ಲವೆಂದು ಅದು ಹೇಳಿದೆ. ಜೇಟ್ಲಿ ಕುಟುಂಬ ಸದಸ್ಯರ ಮತ್ತು ಅವರು ಅಥವಾ ಜೇಟ್ಲಿ ಶೇ.10ಕ್ಕೂ ಅಧಿಕ ಪಾಲು ಬಂಡವಾಳವನ್ನು ಹೊಂದಿರುವ ಕಂಪನಿಗಳ ಬ್ಯಾಂಕ್ ದಾಖಲೆಗಳನ್ನೂ ಕೇಜ್ರಿವಾಲ್ ಕೋರಿದ್ದರು.

ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸುವುದಾಗಿ ಕೇಜ್ರಿವಾಲ್ ಪರ ವಕೀಲ ಅನುಪಮ್ ಶ್ರೀವಾಸ್ತವ ಸುದ್ದಿಗಾರರಿಗೆ ತಿಳಿಸಿದರು.

ಜೇಟ್ಲಿ ಅವರು ಕೇಜ್ರಿವಾಲ್ ಮತ್ತು ಆಪ್ ನಾಯಕರಾದ ರಾಘವ ಚಡ್ಡಾ, ಕುಮಾರ ವಿಶ್ವಾಸ್, ಅಶುತೋಷ್, ಸಂಜಯ ಸಿಂಗ್ ಮತ್ತು ದೀಪಕ್ ಬಾಜಪೈ ಅವರಿಂದ 10 ಕೋ.ರೂ.ಪರಿಹಾರ ಕೋರಿ 2015ರಲ್ಲಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.

ಜೇಟ್ಲಿ ಅವರು 2013ರವರೆಗೆ ಸುಮಾರು 13 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘ (ಡಿಡಿಸಿಎ)ದಲ್ಲಿ ನಡೆದಿತ್ತೆನ್ನಲಾದ ಹಣಕಾಸು ಅಕ್ರಮಗಳ ಕುರಿತಂತೆ ಆಪ್ ನಾಯಕರು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಜೇಟ್ಲಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ದಾಳಿಗಳನ್ನು ನಡೆಸಿದ್ದರು. ಜೇಟ್ಲಿ ಈಗಾಗಲೇ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News