×
Ad

ಶಬ್ದಾತೀತ ವೇಗದ ಛೇದಕ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

Update: 2017-03-01 15:13 IST

ಬಾಲಾಸೋರ (ಒಡಿಶಾ),ಮಾ.1: ಭಾರತವು ದೇಶಿಯವಾಗಿ ಅಭಿವೃಧ್ಧಿಗೊಳಿಸಲಾದ ತನ್ನ ಶಬ್ದಾತೀತ ವೇಗದ ಛೇದಕ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಬುಧವಾರ ಯಶಸ್ವಿಯಾಗಿ ನಡೆಸಿತು. ಈ ಛೇದಕ ಕ್ಷಿಪಣಿಯು ಕೆಳಮಟ್ಟದಲ್ಲಿ ಬರುವ ಶತ್ರು ಕ್ಷಿಪಣಿಯನ್ನು ನಾಶಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಇದು ಛೇದಕ ಕ್ಷಿಪಣಿಯ ಎರಡನೆಯ ಪರೀಕ್ಷಾರ್ಥ ಪ್ರಯೋಗವಾಗಿದ್ದು, ಬಹುಸ್ತರಗಳ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ರೂಪಿಸುವ ಪ್ರಯತ್ನದ ಭಾಗವಾಗಿದೆ.

ಪೃಥ್ವಿ ಕ್ಷಿಪಣಿಯನ್ನು ಗುರಿಯನ್ನಾಗಿ ಬಳಸಿಕೊಂಡಿದ್ದು, ಅದನ್ನು ಇಲ್ಲಿಗೆ ಸಮೀಪದ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ಬೆಳಿಗ್ಗೆ 10:10ಕ್ಕೆ ಉಡಾವಣೆ ಗೊಳಿಸಲಾಗಿತ್ತು. ನಾಲ್ಕು ನಿಮಿಷಗಳ ಬಳಿಕ ಬಂಗಾಲ ಉಪಸಾಗರದ ಅಬ್ದುಲ್ ಕಲಾಂ ದ್ವೀಪದಿಂದ ನಭಕ್ಕೆ ಹಾರಿದ ಛೇದಕ ಕ್ಷಿಪಣಿಯು ಆಗಸದ ಮಧ್ಯೆ ತನ್ನತ್ತ ಬರುತ್ತಿದ್ದ ಶತ್ರು ಕ್ಷಿಪಣಿ (ಪೃಥ್ವಿ)ಯ ಮೇಲೆ ಕರಾರುವಾಕ್ಕಾಗಿ ಎರಗಿ ಅದನ್ನು ನಾಶಗೊಳಿಸಿತು ಎಂದು ರಕ್ಷಣಾ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದರು.

ಇದೊಂದು ಅತ್ಯುತ್ತಮ ಪರೀಕ್ಷಾರ್ಥ ಪ್ರಯೋಗವಾಗಿತ್ತು. ಛೇದಕ ಕ್ಷಿಪಣಿಯು ಶತ್ರು ಕ್ಷಿಪಣಿಯ ಮೇಲೆ ನೇರವಾಗಿ ಅಪ್ಪಳಿಸಿತ್ತು ಎಂದು ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ವಿಜ್ಞಾನಿಯೋರ್ವರು ಹೇಳಿದರು. ಛೇದಕವು 7.7 ಮೀ.ಉದ್ದದ ಏಕಹಂತದ ಘನ ರಾಕೆಟ್ ಚಾಲಿತ ಕ್ಷಿಪಣಿಯಾಗಿದ್ದು, ಪಥದರ್ಶಕ ವ್ಯವಸ್ಥೆ, ಹೈಟೆಕ್ ಕಂಪ್ಯೂಟರ್ ಮತ್ತು ಇಲೆಕ್ಟ್ರೋ-ಮೆಕ್ಯಾನಿಕಲ್ ಆ್ಯಕ್ಟಿವೇಟರ್‌ಗಳನ್ನು ಹೊಂದಿದೆ ಎಂದು ಅಧಿಕಾರಿ ತಿಳಿಸಿದರು.

ಫೆ.11ರಂದು ಒಡಿಶಾ ತೀರದಾಚೆ ಛೇದಕ ಕ್ಷಿಪಣಿಯ ಮೊದಲ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ಭೂಮಿಯ ವಾತಾವರಣದಿಂದ ಸುಮಾರು 50 ಕಿ.ಮೀ.ಎತ್ತರದ ಮೇಲ್ಮಟ್ಟದಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News