ಕಾಶ್ಮೀರ:ಸುದೀರ್ಘ ಅವಧಿಯಿಂದ ಮುಚ್ಚಿದ್ದ ಶಾಲೆಗಳು ಕೊನೆಗೂ ಪುನರಾರಂಭ
ಶ್ರೀನಗರ,ಮಾ.1: ತಿಂಗಳುಗಳ ಕಾಲ ಮುಚ್ಚಿದ್ದ, ಕಾಶ್ಮೀರ ಕಣಿವೆಯಲ್ಲಿನ ಶಾಲೆಗಳು ಬುಧವಾರ ಪುನರಾರಂಭಗೊಂಡವು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದೇಪದೇ ತಲೆದೋರಿದ್ದ ಅಶಾಂತಿ ಮತ್ತು ನಂತರದ ಚಳಿಗಾಲದ ರಜೆಯಿಂದಾಗಿ ಕಣಿವೆಯಲ್ಲಿನ ಶಾಲೆಗಳು ಮುಚ್ಚಿದ್ದವು.
ಮಳೆ ಬಂದು ತಾಪಮಾನ ಕುಸಿದಿದ್ದರೂ ಮಕ್ಕಳು ಬೆಳಿಗ್ಗೆ ಸಮವಸ್ತ್ರಗಳನ್ನು ಧರಿಸಿ ಕೊಂಡು ಸಂಭ್ರಮದಿಂದಲೇ ಶಾಲೆಗಳಿಗೆ ತೆರಳಿದ್ದರು. ಕಳೆದ ವರ್ಷದ ಕಾಶ್ಮೀರ ಅಶಾಂತಿಯಿಂದಾಗಿ ಮಕ್ಕಳ ಕಲಿಕೆಯ ಮೇಲೆ ತೀವ್ರ ದುಷ್ಪರಿಣಾಮವುಂಟಾಗಿತ್ತು.
ಶಾಲೆಗಳು ಬುಧವಾರ ಪುನರಾರಂಭಗೊಂಡಿವೆ. ವಿದ್ಯಾರ್ಥಿಗಳ ಅಮೂಲ್ಯ ಶೈಕ್ಷಣಿಕ ವರ್ಷ ಮತ್ತೆ ಹಾಳಾಗದಂತೆ ಕಣಿವೆಯಲ್ಲೀಗ ಪರಿಸ್ಥಿತಿ ಶಾಂತಿಯುತವಾಗಿರುತ್ತದೆ ಎಂದು ಆಶಿಸಿದ್ದೇವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೋರ್ವರು ಹೇಳಿದರು.
ಆದರೆ ಗುರೆಝ್, ಮಛ್ಲಿ, ತಂಗಧಾರ್ ಸೇರಿದಂತೆ ಕಾಶ್ಮೀರದ ಕೆಲವು ಹಿಮಾಚ್ಛಾದಿತ ಪ್ರದೇಶಗಳಲ್ಲಿಯ ಶಾಲೆಗಳು ಹಿಮಪಾತ ಮತ್ತು ಭೂಕುಸಿತಗಳ ಭೀತಿಯಿಂದಾಗಿ ಮಾ.12ರವರೆಗೆ ಮುಚ್ಚಿಯೇ ಇರಲಿದ್ದು, ಮಾ.13ರಂದು ಪುನರಾರಂಭಗೊಳ್ಳಲಿವೆ.
ಕಳೆದ ವರ್ಷದ ಜುಲೈನಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿ ಕೊಲ್ಲಲ್ಪಟ್ಟ ನಂತರ ಸೃಷ್ಟಿಯಾಗಿದ್ದ ಅಶಾಂತಿಯಿಂದಾಗಿ ಕಾಶ್ಮೀರ ಕಣಿವೆಯಲ್ಲಿನ ಶಾಲೆಗಳು ಆರು ತಿಂಗಳ ಕಾಲ ಮುಚ್ಚಿಯೇ ಇದ್ದವು.
ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳಿಂದ ಪ್ರಾಯೋಜಿತ ಬಂದ್‌ಗಳಲ್ಲಿ ಸಡಿಲಿಕೆ ಯಿಲ್ಲದ್ದರಿಂದ ರಾಜ್ಯ ಸರಕಾರವು ಕಳೆದ ವರ್ಷದ ನವೆಂಬರ್‌ನಲ್ಲಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗಿದ್ದ 10 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಸಾಮೂಹಿಕವಾಗಿ ತೇರ್ಗಡೆಗೊಳಿಸಿದೆ.
10 ಮತ್ತು 12ನೇ ತರಗತಿಯ ಪರೀಕ್ಷೆಗಳು ಈ ವರ್ಷದ ಜನವರಿಯಲ್ಲಿ ಪ್ರಕಟವಾಗಿದ್ದವು.