ಜಾಕ್ ಮನ್ ಪ್ರಕಾರ ಈ ಭಾರತೀಯ ನಟನಿಗೆ ಮುಂದಿನ ವೋಲ್ವರಿನ್ ಪಾತ್ರ
ಮುಂಬೈ, ಮಾ.1 : ಖ್ಯಾತ ಹಾಲಿವುಡ್ ನಟ ಹಾಗು ಸದ್ಯ ಕ್ಯಾನ್ಸರ್ ನಿಂದ ಬಳಲುತ್ತಿರುವ ಹ್ಯು ಜಾಕ್ ಮನ್ ಅವರ ಸೂಪರ್ ಹಿಟ್ ವೋಲ್ವರಿನ್ ಸರಣಿ ಚಿತ್ರಗಳು ಗೊತ್ತಲ್ಲವೇ ? ಅದರ 9 ನೇ ಚಿತ್ರ ಲೋಗನ್ ಮಾರ್ಚ್ 3 ರಂದು ಬಿಡುಗಡೆಯಾಗಲಿದೆ. ಇದು ಜಾಕ್ ಮನ್ ಅವರ ಕೊನೆಯ ವೋಲ್ವರಿನ್ ಚಿತ್ರವೂ ಹೌದು.
ಆದರೆ ಫ್ಯಾಕ್ಸ್ ಕಂಪೆನಿ ಪಾಲಿಗೆ ಹಣದ ಹೊಳೆ ಹರಿಸಿರುವ ವೋಲ್ವರೈನ್ ಸರಣಿ ಮಾತ್ರ ಖಂಡಿತ ಮುಂದುವರಿಯಲಿದೆ. ಹಾಗಾದರೆ ಮುಂದಿನ ವೋಲ್ವರಿನ್ ಯಾರು ? ಜಾಕ್ ಮನ್ಅವರ ಸ್ಥಾನ ತುಂಬುವುದೆಂದರೆ ಸುಲಭದ ಮಾತೆ ? ಅಂತಹ ಪ್ರತಿಭೆ , ಸ್ಟಾರ್ ಪವರ್ ಇರುವ ನಟ ಯಾರು ?
ಇದಕ್ಕೆ ಸ್ವತಃ ಜಾಕ್ ಮನ್ ಅವರ ಆಯ್ಕೆ ಯಾರು ಗೊತ್ತೇ ? ಶಾರುಖ್ ಖಾನ್ ! ಹೌದು , ಜಾಕ್ ಮನ್ ಅವರೇ ಮುಂದಿನ ವೋಲ್ವರಿನ್ ಆಗಿ ಶಾರುಖ್ ನಟಿಸಬಹುದು ಎಂದು ಹೇಳಿದ್ದಾರೆ.
ಆದರೆ ಇದನ್ನು ಯಾರೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಯಾಕೆಂದರೆ ಭಾರತೀಯ ಪತ್ರಕರ್ತ ರಾಜೀವ್ ಮಸದ್ ಅವರ ಪ್ರಶ್ನೆಗೆ ಉತ್ತರಿಸುತ್ತಾ ಜಾಕ್ ಮನ್ ಶಾರುಖ್ ಹೆಸರು ಹೇಳಿದ್ದಾರೆ. ಈಗಾಗಲೇ ಇದೇ ಪ್ರಶ್ನೆಯನ್ನು ಜಾಕ್ ಮನ್ ಕನಿಷ್ಠ ನೂರು ಬಾರಿ ಎದುರಿಸಿದ್ದಾರೆ. ಭಾರತೀಯ ಪತ್ರಕರ್ತ ಕೇಳುವಾಗ ಶಾರುಖ್ ಹೆಸರು ಹೇಳುವ ಮೂಲಕ ದೇಶದಲ್ಲಿ ಒಂದಿಷ್ಟು ಚರ್ಚೆಗೆ ಕಾರಣವಾಗಬಹುದು, ಶಾರುಖ್ ಅವರ ಬೃಹತ್ ಅಭಿಮಾನಿ ಬಳಗದ ಮನಗೆಲ್ಲಬಹುದು ಎಂದು ಅವರು ಹೇಳಿರುವ ಸಾಧ್ಯತೆ ಇದೆ.
ಏನೇ ಆಗಲಿ , ಜಾಕ್ ಮನ್ ನಂತಹ ಪ್ರತಿಷ್ಠಿತ ಹಾಲಿವುಡ್ ನಟನೊಬ್ಬ ತನ್ನ ಪಾತ್ರಕ್ಕೆ ಶಾರುಖ್ ನ್ಯಾಯ ಸಲ್ಲಿಸಬಹುದು ಎಂದು ಹೇಳಿರುವುದು ನಿಜಕ್ಕೂ ಶಾರುಖ್ ಹಾಗು ಭಾರತೀಯ ಸಿನಿಮಾ ರಂಗಕ್ಕೆ ಸಂತಸ ತರುವ ವಿಷಯ.