×
Ad

ಕೇರಳ ಸಿಎಂ ಪಿಣರಾಯಿ ತಲೆಗೆ ರೂ. 1 ಕೋಟಿ ಬಹುಮಾನ ಘೋಷಿಸಿದ ಆರೆಸ್ಸೆಸ್ ನಾಯಕ

Update: 2017-03-02 14:44 IST

ಹೊಸದಿಲ್ಲಿ,ಮಾ.2 : ಮಧ್ಯ ಪ್ರದೇಶದ ಉಜ್ಜೈನಿಯ ಆರೆಸ್ಸೆಸ್ ನಾಯಕ ಡಾ.ಚಂದ್ರಾವತ್ ಅವರು ಕೇರಳ ಮುಖ್ಯಮಂತ್ರಿ ಹಾಗೂ ಹಿರಿಯ ಕಮ್ಯುನಿಸ್ಟ್ ನಾಯಕ ಪಿಣರಾಯಿ ವಿಜಯನ್ ಅವರ ತಲೆಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಗೆ ಪಿಣರಾಯಿ ಅವರು ಕಾರಣವೆಂದು ಚಂದ್ರಾವತ್ ಆರೋಪಿಸಿದ್ದಾರೆ.

ಉಜ್ಜೈನಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ತಾವು ಘೋಷಿಸಿದ ನಗದು ಬಹುಮಾನವನ್ನು ನೀಡಲು ತಾವು ತಮ್ಮ ಆಸ್ತಿಯನ್ನು ಕೂಡ ಮಾರಲು ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ. ಚಂದ್ರಾವತ್ ಅವರು ತಮ್ಮ ಹೇಳಿಕೆಯನ್ನು ಬಿಜೆಪಿ ಸಂಸದ ಚಿಂತಾಮಣಿ ಮಾಲವಿಯ ಹಾಗೂ ಶಾಸಕ ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ಮಾಡಿದ್ದಾರೆ.

ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸಂಸದ ಸೀತಾರಾಂ ಯಚೂರಿ ಆರೆಸ್ಸೆಸ್ಸನ್ನು ಉಗ್ರ ಸಂಘಟನೆಯೆಂದು ಬಣ್ಣಿಸಿದ್ದಾರೆ. ‘‘ಉಗ್ರವಾದಿ ಸಂಘಟನೆಯಾಗಿ ಆರೆಸ್ಸೆಸ್ ತನ್ನ ನಿಜ ಬಣ್ಣವನ್ನು ಅನಾವರಣಗೊಳಿಸಿದೆ. ಪ್ರಧಾನಿ ಮತ್ತವರ ಸರಕಾರ ಮೌನವಾಗಿರುವುದನ್ನು ನಿಲ್ಲಿಸುವುದೇ?’’ ಎಂದು ಯಚೂರಿ ಟ್ವೀಟ್ ಮಾಡಿದ್ದಾರೆ.

ಕೇರಳದಲ್ಲಿ ಆರೆಸ್ಸೆಸ್-ಬಿಜೆಪಿ ಹಾಗೂ ಸಿಪಿಐ(ಎಂ) ಕಾರ್ಯಕರ್ತರ ನಡುವೆ ಹಿಂಸಾಚಾರ ಸಾಮಾನ್ಯವಾಗಿ ಬಿಟ್ಟಿದ್ದು ಕಳೆದ ತಿಂಗಳು ಅಲ್ಲಿ ಬಿಜೆಪಿ ನಾಯಕ ಸಂತೋಷ್ ಅವರ ಹತ್ಯೆ ನಡೆದಿತ್ತು. ಇದು ಪಿಣರಾಯಿ ಸರಕಾರ ಮೇ 2016ರಲ್ಲಿ ಅಧಿಕಾರಕ್ಕೆ ಬಂದ ನಂತರ ನಡೆದ ಎಂಟನೆಯ ರಾಜಕೀಯ ಕೊಲೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News