ಆರೋಗ್ಯ ಕ್ಷೇತ್ರದಲ್ಲಿ 'ಕ್ರಾಂತಿಕಾರಿ' ಹೆಜ್ಜೆ ಇಟ್ಟ ಆಮ್ ಆದ್ಮಿ ಸರ್ಕಾರ
ಹೊಸದಿಲ್ಲಿ ಮಾ.2 :ರಾಜಧಾನಿಯ ನಾಗರಿಕರಿಗೆ ಎಲ್ಲಾ ರೇಡಿಯಾಲಜಿ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸುವ ಕಲ್ಯಾಣ ಯೋಜನೆಯೊಂದನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಉದ್ಘಾಟಿಸಲಿದ್ದಾರೆ.
ಈ ಬಗ್ಗೆ ಹಲವಾರು ದೈನಿಕಗಳಲ್ಲಿ ಇಂದು ದಿಲ್ಲಿ ಸರಕಾರ ಜಾಹೀರಾತು ನೀಡಿದೆ. ಅದರನ್ವಯ ಎಂಆರ್‌ಐ, ಸಿಟಿ, ಪೆಟ್ ಸ್ಕ್ಯಾನ್ ಹಾಗೂ ಅಲ್ಟ್ರಾ ಸೌಂಡ್ ಪರೀಕ್ಷೆಗಳು ಎಲ್ಲಾ ನಾಗರಿಕರಿಗೆ ಸಂಪೂರ್ಣವಾಗಿ ಉಚಿತವಾಗುವುದು.
ರಾಜ್ಯ ಆರೋಗ್ಯ ಸಚಿವಾಲಯದಿಂದ ಅನುಮೋದಿತ 30 ಸರಕಾರಿ ಆಸ್ಪತ್ರೆಗಳು ಅಥವಾ 23 ಪಾಲಿಕ್ಲಿನಿಕ್ಕುಗಳ ವೈದ್ಯರ ಶಿಫಾರಸಿನ ಮೇರೆಗೆ ರೋಗಿಗಳು ಆರೋಗ್ಯ ಸೇವೆಗಳ ನಿರ್ದೇಶನಾಲಯದಿಂದ ಅನುಮೋದಿತ ದಿಲ್ಲಿಯಲ್ಲಿರುವ ಖಾಸಗಿ ತಪಾಸಣ ಕೇಂದ್ರಗಳಲ್ಲಿ ಪರೀಕ್ಷೆಗೊಳಗಾಗಬಹುದಾಗಿದೆ.
ಈ ಹಿಂದೆ ಕೇಜ್ರಿವಾಲ್ ಅವರು ಉಚಿತ ಎಂಆರ್‌ಐ, ಪೆಟ್ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯ ಬಡವರಿಗೆ ಉಚಿತವಾಗಿ ಒದಗಿಸಲಾಗುವುದು ಎಂದು ಹೇಳಿದ್ದರು. ಇದೀಗ ಇದರ ಜತೆಗೆ ಬಡವರಿಗೆ ಅಲ್ಟ್ರಾಸೌಂಡ್, ಕಲರ್ ಡಾಪ್ಲರ್, ಎಕ್ಸ್-ರೇ ಮ್ಯಾಮ್ಮೋಗ್ರಾಫಿ, ಎಂಆರ್‌ಐ ಮ್ಯಾಮ್ಮೋಗ್ರಾಫಿ, ಇಸಿಜಿ ಟ್ರೆಡ್‌ಮಿಲ್ ಟೆಸ್ಟ್, ಇಇಜಿ ಹಾಗೂ ಇಎಂಜಿ ಪರೀಕ್ಷೆಗಳೂ ಉಚಿತವಾಗಲಿವೆ.
ಈ ಯೋಜನೆಗಳು ತಕ್ಷಣದಿಂದ ಜಾರಿಗೆ ಬರಲಿವೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಟ್ವೀಟ್ ಮಾಡಿದ್ದಾರೆ.