ಬಹುಶ್ರುತತೆ ನಿನ್ನ ಹೆಸರು ಸ್ತ್ರೀಯಲ್ತೆ?!

Update: 2023-06-30 06:19 GMT

ಎಲ್ಲರಂತೆ ಜೀವನ ಸಾಗಿಸುತ್ತಲೇ ಇವೆಲ್ಲವನ್ನೂ ಸಮಾನಾಂತರವಾಗಿ ಹೆಚ್ಚುವರಿ ಪರಿಶ್ರಮ ಹಾಕಿ ಮಾಡುತ್ತಿರುತ್ತಾರೆ ಎಂಬುದೇ ಬಹುಶ್ರುತರ ಪ್ಲಸ್ ಪಾಯಿಂಟ್. ಸೌಲಭ್ಯಗಳಿಲ್ಲದ ಕುಗ್ರಾಮಗಳಲ್ಲಿ ಗೃಹಕೃತ್ಯದ ನಡುವೆಯೇ ತಮ್ಮ ವಿಶೇಷ ಚೇತನ ಮಕ್ಕಳನ್ನು ಶಾಲೆಗೆ ಹೊತ್ತೊಯ್ಯುವ ತಾಯಂದಿರು, ತರಬೇತಿ ಹೊಂದಿದ ಶಿಕ್ಷಕಿಯರು ಹೇಳಿಕೊಡುವ ಕೌಶಲಗಳನ್ನು ಮನೆಗಳಲ್ಲಿ ಬಳಸಿ ಅವರ ವಿಕಾಸ, ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲುವವರು ಗಳಿಸಿಕೊಳ್ಳುವ ಸಂಕಲ್ಪಶಕ್ತಿಯಂತೂ ಇತರ ಸಾಮಾನ್ಯರ ಅಳವಿಗೆ ಮೀರಿದಂತಿರುತ್ತದೆ.

ತಮಿಳುನಾಡಿನ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಕೆಲ ತಿಂಗಳುಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾಗ ಅವರದೊಂದು ಅಪರೂಪದ ಸಂದರ್ಶನ ಟೆಲಿವಿಷನ್ ಚಾನೆಲ್‌ಗಳಲ್ಲಿ ಪದೇಪದೇ ಪ್ರಸಾರವಾಗುತ್ತಿತ್ತು. ಮೇಜಿನ ಆ ಬದಿಗೆ ಇದ್ದವರು, ಕಳೆದ ವರ್ಷಗಳ ಹಿಂದಿ ಚಿತ್ರ ತಾರೆ, ಸೋಶಿಯಲೈಟ್ ಸಿಮಿ ಗರೆವಾಲ್. ಪ್ರಶ್ನೆಗಳು ಉರುಳಿದಂತೆ, ಜಯಲಲಿತಾ ತೆರೆದುಕೊಂಡರು; ಬಿಗಿದಿಟ್ಟುಕೊಂಡ ಭಾವ ಭಂಗಿಗಳು ಸಡಿಲಾದವು. ಮುಖಮುದ್ರೆ ಪ್ರಸನ್ನವಾಯಿತು. ಇಷ್ಟದ ಚಿತ್ರಗೀತೆಯ ಒಂದು ಸಾಲು ಹಾಡುವಂತೆ ಸಂದರ್ಶಕಿ ಕೋರಿಕೊಂಡಾಗ, ಅಯ್ಯೋ, ಅಭ್ಯಾಸ ಬಿಟ್ಟುಹೋಗಿದೆ ಎಂದು ಸಂಕೋಚ ಪಟ್ಟುಕೊಂಡರು.

‘‘ಆ ಜಾ ಸನಮ್ ಮಧುರ್ ಗೀತ್ ಗಾಯೆ ಹಮ್’’ ಎಂದು ಸ್ವತಃ ಸಿಮಿ ಸಣ್ಣದನಿಯಲ್ಲಿ ಗುನಗುನಿಸಿ ಪ್ರೇರೇಪಿಸಿದಾಗ ಜತೆಗೂಡಿದರು. ಮಧುರವಾಗಿ ಹಾಡಿಮುಗಿಸಿದರು ಎಂದು ಬೇರೆ ಹೇಳಬೇಕಾಗಿಲ್ಲ. ಏಕೆಂದರೆ, ಅವರು ತಾವು ನಾಯಕಿಯಾಗಿದ್ದ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಮಾಡಿದ್ದವರು. ಆ ಪರ್ವದಲ್ಲಿ ಜಯಲಲಿತಾ ಸೇರಿದಂತೆ, ಹಲವು ಭಾಷೆಗಳ ಸಿನೆಮಾ ಹೀರೋಯಿನ್‌ಗಳು ಸುಶ್ರಾವ್ಯ ಗಾಯಕಿಯರೂ ಆಗಿರುತ್ತಿದ್ದುದು ಒಂದು ಸಾಮಾನ್ಯ ಸಂಗತಿ. ಪ್ರತಿ ಸಿನೆಮಾಗೂ ಒಂದು ರೈಲುಬಂಡಿ ತುಂಬ ಹೊಸ ಗಾಯಕ-ಗಾಯಕಿಯರು ಒದಗುವ ಇಂದಿನ ಸನ್ನಿವೇಶಕ್ಕೆ ಅದು ಅತಿಶಯ. ಆಗಿನ ತಾರೆಯರು ಬಹುಮುಖಿ ಪ್ರತಿಭಾವಂತರಾಗಿದ್ದುದನ್ನು ಜಾಹೀರು ಮಾಡುವ ವಿವರ. ದೈನಿಕದ ಒಣ ಅವತಾರದಲ್ಲಿ ಬಹುಶ್ರುತತೆ, ಹಲವು ಕೆಲಸಗಳನ್ನು ಏಕ ಕಾಲದಲ್ಲಿ ಮಾಡಿ ಮುಗಿಸುವ (ತಾಂತ್ರಿಕವಾಗಿ ಮಾನವ ಮಿದುಳು, ಇಂತಹದೊಂದು ಸಾಮರ್ಥ್ಯವನ್ನು ಸಂಪೂರ್ಣ ಹೊಂದಿಲ್ಲ ಎಂಬುದು ಸಾಬೀತಾಗಿದ್ದರೂ) ‘ಮಲ್ಟಿ ಟಾಸ್ಕಿಂಗ್’ ಎಂಬ ಹೊಸ ಹೆಸರು ಹೊತ್ತಿದೆ. ಮಹಿಳೆಯರು ಈ ವಿಷಯದಲ್ಲಿ-ಏಕ ಕಾಲದಲ್ಲಿ ಅಲ್ಲದಿದ್ದರೂ, ಸಮಯವನ್ನು ಚೆನ್ನಾಗಿ ಹೊಂದಿಸಿಕೊಂಡು ಹಲವು ಕೆಲಸ ಮಾಡುವ ಸಂಪನ್ಮೂಲತೆ-ಹುಟ್ಟಾ ಪರಿಣತರು ಎಂಬುದು ಹೆಚ್ಚು ಹೆಚ್ಚು ಪ್ರಸಾರವಾಗುತ್ತಿದೆ:

ಶಂಖದ ಬಾಯಲ್ಲಿ ಬಂದರೇ ತೀರ್ಥ ಅಲ್ಲವೆ, ಎಂದು ಮೂಗು ಮುರಿಯಲು ಮಹಿಳೆಯರೆಲ್ಲ ಮುಂದಾಗಿರಿ! ತಂತಮ್ಮ ತಾಯಿ, ಅಜ್ಜಿ, ದೊಡ್ಡಮ್ಮ, ಸೋದರತ್ತೆ, ಮಾಮಿ, ಚಿಕ್ಕಮ್ಮ ಮತ್ತಿತರ ಹಿರಿಯ ಮಹಿಳೆಯರು ಗೃಹಕೃತ್ಯದೊಡನೆ ಅಂಟಿಸಿಕೊಂಡಿದ್ದ ಅಸಂಖ್ಯ ಹವ್ಯಾಸಗಳು ಈ ತಲೆಮಾರಿನ ಪ್ರತಿ ಹುಡುಗಿಗೂ ‘ಮಲ್ಟಿ ಟಾಸ್ಕಿಂಗ್’ ಬೆಳಕಲ್ಲಿ ಕೋರೈಸುತ್ತವೆ: ಅಡುಗೆ ಮಾಡುತ್ತಲೇ, ಮನೆ ಮುಂದಿನ ತೋಟಕ್ಕೆ ಒಂದು ಸುತ್ತು ಹೊಡೆದು, ಅಲ್ಲಿ ಆಗಬೇಕಾಗಿರುವ ಕೆಲಸಗಳ ಅಜೆಂಡಾ ಮನದಲ್ಲೇ ಮೂಡಿಸಿಕೊಳ್ಳುವವರು, ಅದಿಲ್ಲದಿದ್ದರೆ ಹೈನುಗಾರಿಕೆಗೆ ಬೇಕಾದ ಸಮಯ ಹವಣಿಸಿಕೊಂಡು, ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪವ್ಯಾಪಾರ ಮಾಡಿ ಸಣ್ಣದೊಂದು ಸೇವಿಂಗ್ಸ್‌ಗೆ ಮುಂದಾಗುವವರು, ಕೈತೋಟದ ಹೆಚ್ಚುವರಿ ತರಕಾರಿ ಮಾರುಕಟ್ಟೆಗೆ ಹಾಕುವವರು ಗ್ರಾಮೀಣ ಪ್ರದೇಶದ ತಾಯಂದಿರು.

ನಗರಕ್ಕೆ ಬಂದರೆ ಬೇರೆಯ ಚಿತ್ರ: ಬಿಡುವಿನ ನೀರವ ಮಧ್ಯಾಹ್ನಗಳಲ್ಲಿ ಹೊಲಿಯುವ, ಪ್ಲಾಸ್ಟಿಕ್ ವಯರ್ ಬುಟ್ಟಿ ಹೆಣೆಯುವ, ಕೊಬ್ಬರಿ ಗಿಟುಕು ಕೊರೆಯುವ, ಕ್ರೋಶಾ-ನಿಟ್ಟಿಂಗ್ ನೇಯುವ, ಪೇಂಟಿಂಗ್ ಮಾಡುವ ಗೃಹಿಣಿಯರು. ಅದರಲ್ಲಿ ಮುಳುಗಿರುವಷ್ಟು ಹೊತ್ತು ಅಪ್ಪಟ ಕಲಾವಿದರೇ ಅವರು. ಪಾಶ್ಚಿಮಾತ್ಯ ದೇಶಗಳಲ್ಲಿ ಸ್ವಲ್ಪಭಿನ್ನ ಬಗೆಯ ಸರ್ವಿಸಿಂಗ್, ಸಹಾಯಾರ್ಥ ಸೇವೆ: ಮನೆ ತುಂಬ ಅರ್ಧ ಡಜನ್ ಮಕ್ಕಳಿರುವ ವಿಧುರರಿಗೆ, ಅನಾರೋಗ್ಯ ಪೀಡಿತ ಮನೆಯೊಡತಿಯರಿಗೆ ನೆರವಾಗಲು ಬಂದು, ಆ ಕುಟುಂಬದ ಕಷ್ಟ-ಸುಖ-ಸೌಹಾರ್ದದಲ್ಲಿ ಪಾಲ್ಗೊಂಡು, ಊಟ-ಉಪಚಾರ ನೆರವೇರಿಸಿ, ವೇಳೆ ಮುಗಿಯುತ್ತಲೇ ತಮ್ಮ ಮನೆಗೋಡುವವರು ‘ಹೋಮ್ ಮೇಕರ್ಸ್‌’. ಎಳೆ ಶಿಶುಗಳನ್ನು ಪಾಲಿಸಿ, ಪೋಷಿಸಿ ಕೊಡುವ ‘ನ್ಯಾನಿಯರು’ ಸಿರಿವಂತ ಸಂಸಾರಗಳಲ್ಲಿ ಕಾಣಸಿಗುತ್ತಾರೆ. ಸ್ವಲ್ಪಬೆಳೆದ ಮಕ್ಕಳಿಗಾದರೆ, ಗವರ್ನೆಸ್‌ಗಳು. ‘ಸೌಂಡ್ ಆಫ್ ಮ್ಯೂಸಿಕ್’ ಚಲನಚಿತ್ರದಲ್ಲಿ ಪುಂಡು ಮಕ್ಕಳನ್ನು ಸಂಗೀತದ ಗಾಳ ಹಾಕಿ ಪಳಗಿಸುವ ಗವರ್ನೆಸ್ ಬಹುತೇಕರಿಗೆ ಚಿರಪರಿಚಿತ. ಸಣ್ಣ ವಯಸ್ಸಿನ ಆದರೆ ದೊಡ್ಡ ಜವಾಬ್ದಾರಿ ಹೊತ್ತ ಆ ಯುವತಿಯನ್ನು ಕಲೆಯ ಜಗತ್ತಿನಲ್ಲಿ ಅಜರಾಮರ ಮಾಡಿದವರಿಗೆ ಶರಣು.

ಬೃಹತ್ತಾದ ಒಂದು ಕೂಡು ಕುಟುಂಬದಂತಿರುವ ನಮ್ಮ ಗ್ರಾಮೀಣ ಸಮಾಜದಲ್ಲಿ ಸುಖ ಪ್ರಸವ ಮಾಡಿಸುವ ಕುಶಲ ದಾದಿಯರು, ಸಾಮಾನ್ಯ ಜಡ್ಡು ಜಾಪತ್ರೆಗಳಿಗೆ ಔಷಧ ನೀಡುವ ಅನುಭವಿ ಅಜ್ಜಿಯರು ಬೆಲೆ ಕಟ್ಟಲಾರದ ಸೇವೆ ಒದಗಿಸುತ್ತಿರುತ್ತಾರೆ. ಸಂಸಾರ ತಾಪತ್ರಯಗಳ ಮೂಗುಬ್ಬಸ ಅನುಭವಿಸುವ ಚಿಕ್ಕ ಪ್ರಾಯದ ಹೆಣ್ಣುಗಳನ್ನು ಆಲಿಸಿ, ಧೈರ್ಯತುಂಬಿ, ಅಗತ್ಯ ಬಿದ್ದರೆ ದೊಡ್ಡ ದುಷ್ಟ ಶಕ್ತಿಗಳೆದುರು ಅವರಿಗಾಗಿ ವಕಾಲತ್ತು ವಹಿಸುವ ಅಸಾಧಾರಣ ಮನೋಬಲದ ಆಪ್ತ ಸಲಹಾಗಾರ್ತಿಯರು ಕಾಪಾಡುವ ಸ್ವಾಸ್ಥ್ಯವೂ ಅಷ್ಟೇ ಅಮೂಲ್ಯ. ಇನ್ನು ರುಚಿ-ಶುಚಿ ತಿಂಡಿ ತಯಾರಿಸುವ, ವರುಷಗಟ್ಟಲೆ ಶ್ರಮವಹಿಸಿ, ತಮ್ಮ ಕೈರುಚಿಯ ಕೋಡುಬಳೆ, ರವೆಉಂಡೆ, ಉಪ್ಪಿನಕಾಯಿ, ಚಟ್ನಿಪುಡಿಗಳ ಬ್ರ್ಯಾಂಡ್ ನಿರ್ಮಿಸಿಕೊಂಡಿರುವ ಪ್ರತಿಭಾವಂತರಿಗಂತೂ ಹೋದಲ್ಲೆಲ್ಲ ಹಿಗ್ಗಿನ ಮಣೆ. ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಇಂತಹ ಚಟುವಟಿಕೆಗಳೆಲ್ಲ ಕ್ರಮೇಣ ಹಿಗ್ಗಿ ಹೊರವಾದರೆ ಒಂದು ಕೈಗಾರಿಕೆ: ಲಾಡು ಬಾಕ್ಸ್‌ಗಳನ್ನು ರಿಕ್ಷಾದಲ್ಲಿ ಹೊತ್ತು ಸಾಗಿಸುವ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದ ಶ್ರೀದೇವಿ, ಹೆಂಗಳೆಯರೆಲ್ಲರ ಯಶಸ್ಸು ಮೈವೆತ್ತಂತೆ ಕಾಣಿಸುವುದಿಲ್ಲವೆ? ಎಲ್ಲರಂತೆ ಜೀವನ ಸಾಗಿಸುತ್ತಲೇ ಇವೆಲ್ಲವನ್ನೂ ಸಮಾನಾಂತರವಾಗಿ ಹೆಚ್ಚುವರಿ ಪರಿಶ್ರಮ ಹಾಕಿ ಮಾಡುತ್ತಿರುತ್ತಾರೆ ಎಂಬುದೇ ಬಹುಶ್ರುತರ ಪ್ಲಸ್ ಪಾಯಿಂಟ್.

ಸೌಲಭ್ಯಗಳಿಲ್ಲದ ಕುಗ್ರಾಮಗಳಲ್ಲಿ ಗೃಹಕೃತ್ಯದ ನಡುವೆಯೇ ತಮ್ಮ ವಿಶೇಷ ಚೇತನ ಮಕ್ಕಳನ್ನು ಶಾಲೆಗೆ ಹೊತ್ತೊಯ್ಯುವ ತಾಯಂದಿರು, ತರಬೇತಿ ಹೊಂದಿದ ಶಿಕ್ಷಕಿಯರು ಹೇಳಿಕೊಡುವ ಕೌಶಲಗಳನ್ನು ಮನೆಗಳಲ್ಲಿ ಬಳಸಿ ಅವರ ವಿಕಾಸ, ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲುವವರು ಗಳಿಸಿಕೊಳ್ಳುವ ಸಂಕಲ್ಪಶಕ್ತಿಯಂತೂ ಇತರ ಸಾಮಾನ್ಯರ ಅಳವಿಗೆ ಮೀರಿದಂತಿರುತ್ತದೆ: ಡೌನ್ಸ್ ಸಿಂಡ್ರೋಮ್ ಹೊತ್ತು ಹುಟ್ಟಿದ ಮಗಳನ್ನು ವೈದ್ಯರ ಮಾರ್ಗದರ್ಶನ ಪಡೆದು, ಸ್ವತಂತ್ರ ಬದುಕಿಗೆ, ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ತಯಾರುಮಾಡಿದ ಅನಾಮಧೇಯ ತಾಯಿಯೊಬ್ಬರ ಹೃದಯಸ್ಪರ್ಶಿ ಕಥಾನಕ ‘‘21ನೆ ಕ್ರೋಮೋಸೋಮ್ ಮತ್ತು ಇತರ ಕಥನಗಳು’’ ಪುಸ್ತಕದಲ್ಲಿದೆ. ಮನೋವೈದ್ಯೆ ಚಂಪಾ ಜೈಪ್ರಕಾಶ್ (ಪ್ರ: ಚಿಂತನ ಪುಸ್ತಕ, ಬೆಂಗಳೂರು) ದಾಖಲಿಸಿರುವ ನೈಜ ಪ್ರಸಂಗಗಳು ಇನ್ನೊಂದೇ ಜಗತ್ತನ್ನು ನಿರಾಡಂಬರವಾಗಿ ಮುಂದಿರಿಸಿ ಓದುಗರನ್ನು ಮುಟ್ಟುವ ಬಗೆ ಅಪ್ಪಟ. ಜನ್ಮಜಾತ (ಜೀನ್ಸ್‌ಜಾತ ಪದ ಟಂಕಿಸಬಹುದು) ಪ್ರತಿಭೆಯೊಂದಿಗೆ, ಶಾಸ್ತ್ರೀಯ ಅಧ್ಯಯನ, ತರಬೇತಿ ಬೇಕಾಗುವ ಸಾಹಿತ್ಯ-ಸಂಗೀತ-ಚಿತ್ರಕಲೆ ಮುಂತಾದವುಗಳಲ್ಲಿ ಸಮಾನ ಆಸಕ್ತಿ ತಳೆದು ದುಪ್ಪಟ್ಟು ಯಶಸ್ವಿಯಾಗುವ ಬಹುಶ್ರುತ ಮಹಿಳೆಯರ ಪರಂಪರೆಯೇ ಇದೆ. ಕನ್ನಡ ಸಂದರ್ಭವನ್ನು ಅವಲೋಕಿಸಿದಾಗ, ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಸಾಹಿತ್ಯ, ಚಳವಳಿ, ಪತ್ರಿಕೋದ್ಯಮಗಳನ್ನು ಒಂದು ಮಾಡಿಕೊಂಡು ಸಾಧನೆ ಮಾಡಿದವರಲ್ಲಿ ಪ್ರಮುಖರಾಗಿದ್ದ ತಿರುಮಲೈ ರಾಜಮ್ಮ, ಆರ್. ಕಲ್ಯಾಣಮ್ಮ ಸಂಗೀತದಂತಹ ಲಲಿತ ಕಲೆಯಲ್ಲೂ ಪರಿಶ್ರಮ ಹೊಂದಿದ್ದು ಗೊತ್ತಾಗುತ್ತದೆ. ಸದ್ಯ ನಮ್ಮ ನಡುವೆ ಇರುವ ಹಿರಿಯರ ಹೊಳೆವ ಬಹು ಪಾರಂಗತತೆಯ ಒಂದೆರಡು ಉದಾಹರಣೆಗಳನ್ನು ಮುಂದಿರಿಸುವ ಮನಸ್ಸಾಗುತ್ತಿದೆ.

ಉಡುಪಿ ಮೂಲದ ಕನ್ನಡ ಲೇಖಕಿ ಉಪಾ ಪಿ. ರೈ, ಇಪ್ಪತ್ತೈದು ವರ್ಷ ಬ್ಯಾಂಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಇದೇ ಸಮಯದಲ್ಲಿ ಹಲವು ಕಾದಂಬರಿ, ಕಥಾಸಂಕಲನ ಬರೆದು ಪ್ರಕಟಿಸಿದ್ದರು. ಬೆಂಗಳೂರಿನಲ್ಲಿ ನೆಲೆಯಾಗಿದ್ದು, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ತಮ್ಮ ಸಂಘಟನಾ ಚಾತುರ್ಯ, ಆಡಳಿತ ಕೌಶಲಗಳನ್ನೂ ಅವರು ಸಾಬೀತುಪಡಿಸಿದರು. ಪತ್ರಕರ್ತ ತಂದೆ ಸ್ವಾತಂತ್ರ್ಯಪೂರ್ವ ವರ್ಷಗಳಿಂದಲೂ ಹೊರತರುತ್ತಿದ್ದ ‘ನವಯುಗ’ ಸಾಪ್ತಾಹಿಕವನ್ನು ಅವರ ಕೊನೆಯ ದಿನಗಳ ತನಕ ನಡೆಸಿಕೊಂಡು ಹೋಗಲು ನೆರವಾದ ಅನುಭವಿ. ಈ ಮಧ್ಯೆ, ತಮ್ಮ ಅರವತ್ತನೆ ವರ್ಷದಲ್ಲಿ ಉಷಾ ಚಿತ್ರಕಲೆಯ ಕಡೆ ವಲಸೆ ಹೋದರು. ಒಂದು ಮಾರಣಾಂತಿಕ ಅಪಘಾತಕ್ಕೊಳಗಾಗಿದ್ದು ಇದಕ್ಕೆ ಪ್ರೇರಕ. ಅಲ್ಲಿಯತನಕ ಚಿತ್ರಕಲೆ ಅವರಲ್ಲಿ ಪ್ರಕಟಗೊಂಡಿರಲಿಲ್ಲ ಎನ್ನುವುದು ಅಚ್ಚರಿಗೊಳಿಸುವ ಸಂಗತಿಯೇ; ಚಟುವಟಿಕೆ ರಹಿತ ಹಾಸಿಗೆ ವಾಸದಿಂದ ಬಿಡಿಸಿಕೊಳ್ಳಲು ಕುಂಚ ಹಿಡಿದವರಿಂದ ಇಂದು ಅನೇಕ ಜಲವರ್ಣದ ಲ್ಯಾಂಡ್‌ಸ್ಕೇಪ್, ಆಯಿಲ್ ಪೇಂಟಿಂಗ್, ಮುಂತಾಗಿ ಕಲಾಕೃತಿಗಳು ಚೌಕಟ್ಟುಗೊಂಡಿವೆ.

ಪ್ರದರ್ಶನ, ಕಲಾರಸಿಕರ ಮೆಚ್ಚುಗೆ ಗಳಿಸಿಕೊಂಡಿವೆ. ಬಹಳ ಘಟನಾವಳಿಗಳಿಂದ ತುಂಬಿದ-ಇವೆಂಟ್‌ಫುಲ್ ಜೀವನ ಅವರದು. (ಅದರಲ್ಲಿ ಮೂಳೆ ಮುರಿತ ಮರುಕಳಿಸುತ್ತದೆ ಎಂದು ಅವರ ದೊಡ್ಡ, ನಿಷ್ಕಲ್ಮಶ, ಸಿದ್ಧ ನಗೆಯ ವಿಶ್ವಾಸದಿಂದ ಚೇಷ್ಟೆ ಮಾಡಲಡ್ಡಿಯಿಲ್ಲ!) ಹಾಗಿರುವಾಗ ‘‘ಯಾವ ನಾಳೆಯೂ ನಮ್ಮದಲ್ಲ’’ ಎಂಬಂತಹ, ವಿಶಿಷ್ಟ ಜೀವನದೃಷ್ಟಿ ಸಾರಿ ಹೇಳುವ ಕಾದಂಬರಿಯನ್ನು ಅವರು ಬರೆದಿರುವುದು ಉಲ್ಲೇಖಾರ್ಹ. ಎಪ್ಪತ್ತೆರಡು ತುಂಬಿದರೂ ಮನೆ-ಮಕ್ಕಳು-ಮೊಮ್ಮಕ್ಕಳು, ನೆಂಟರು-ಗೆಳತಿಯರೆನ್ನದೆ ಅಸಂಖ್ಯ ಬಾಂಧವ್ಯ, ನಿರ್ವಹಣೆಯ ಗೋಜಲಿನಲ್ಲಿ ಖುಷಿಯಾಗಿ ಸಿಲುಕಿಕೊಂಡಿದ್ದಾರೆ. ಪೇಂಟಿಂಗ್‌ಗಳ ಪ್ರತ್ಯೇಕ ಬ್ಲಾಗ್ ರಚಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ರೆಗ್ಯುಲರ್!

ಸ್ವಲ್ಪಸಮೀಪದರ್ಶನ ಸಾಧ್ಯವಾದ ಇನ್ನೊಬ್ಬ ಎಪ್ಪತ್ತು ದಾಟಿದ ಬಹುಶ್ರುತ ಮಹಿಳೆ ಅಂದರೆ ಶಕುಂತಲಾ ನರಸಿಂಹನ್. ಬಹು ಸಮಯದಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅವರು ನಗರದ ಕನ್ನಡ-ಇಂಗ್ಲಿಷ್ ಎನ್ನದೆ ಸಕಲ ಪತ್ರಕರ್ತರಿಗೂ ಹತ್ತಿರವಾಗುವ ಹಿತೈಷಿ. ಲೇಖಕಿ, ಪತ್ರಕರ್ತೆ, ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಅಂಕಣಕಾರ್ತಿ, ಮಹಿಳಾಪರ ವಿಚಾರದ ಸಂಪನ್ಮೂಲ ವ್ಯಕ್ತಿ, ಗ್ರಾಹಕ ಹಕ್ಕುಗಳ ಹೋರಾಟಗಾರ್ತಿ, ಸಿಟಿಜನ್ ಫೋರಮ್‌ಗಳ ಕ್ರಿಯಾಶೀಲ ಸದಸ್ಯೆ... ಇವೆಲ್ಲವೂ ಒಂದು ತೂಕವಾದರೆ, ಕರ್ನಾಟಕ ಹಾಗೂ ಹಿಂದೂಸ್ಥಾನಿ ಸಂಗೀತದ ಉಭಯಗಾನ ವಿದುಷಿ ಆಗಿರುವುದು ಇನ್ನೊಂದು ತೂಕ. ಬೆಂಗಳೂರು ಆಕಾಶವಾಣಿಯಲ್ಲಿ ಇಂದಿಗೂ ಶಕುಂತಲಾ ಅವರ ವಿನೂತನ ಥೀಮ್ ಆಧರಿತ ಕಛೇರಿಗಳು ಪ್ರಸಾರಗೊಳ್ಳುತ್ತವೆ ಎಂದರೆ ಅವರ ಪ್ರತಿಭೆ ಎಷ್ಟೊಂದು ನಿತ್ಯನೂತನವಾಗಿದೆ ಎನ್ನುವುದರ ಅಳತೆ ಸಿಕ್ಕೀತು. ಮಹಿಳಾ ವಾಗ್ಗೇಯಕಾರ ಕೃತಿಗಳನ್ನೇ ಆರಿಸಿಕೊಂಡು ಸಾದರಪಡಿಸುವುದು-ಅಣ್ಣಮಾಚಾರ್ಯರ ಪತ್ನಿ ತಿಮ್ಮಕ್ಕ, ತಮ್ಮ ಪತಿಗೆ ಸರಿಸಾಟಿಯಾಗಿ ಗ್ರಾಮ್ಯ ಶೈಲಿಯಲ್ಲೇ ಕೃತಿ ರಚಿಸಿರುವುದನ್ನು ಇದು ತಿಳಿಸಿಕೊಟ್ಟಿದೆ-ಕಲಾವಿದೆಯರಿಂದ ರಚಿತವಾದ ಠುಮ್ರಿಗಳನ್ನು ಜೋಡಿಸಿಕೊಂಡು ಹಾಡುವುದು ಮುಂತಾಗಿ ತಮ್ಮ ವ್ಯಕ್ತಿತ್ವ-ಧೋರಣೆ-ಸ್ತ್ರೀಪರ ನಿಲುವು ಬಿಂಬಿಸುವ ಅನೇಕ ಪ್ರಯೋಗಶೀಲ ಪ್ರದರ್ಶನಗಳನ್ನು ಪ್ರತಿಷ್ಠಿತ ವೇದಿಕೆಗಳಿಂದ ನೀಡಿದ್ದಾರೆ. ಇವುಗಳಿಗೆ ಬೇಕಾದ ಪೂರ್ವ ಸಿದ್ಧತೆ, ಅವರ ವಿದ್ವತ್ತು, ಸಂಶೋಧನೆ, ಪ್ರತಿಭಾವಿಶೇಷಕ್ಕೆ ದಿಕ್ಸೂಚಿ. ಭಾರತ ಮಟ್ಟದಲ್ಲಿ ಬಹುಶ್ರುತ ಮಹಿಳೆಯರ ಒಂದು ಆದಿಮ ಬಗೆ-ಪ್ರೊಟೋಟೈಪ್ ಎನ್ನಬಹುದಾದ ಕಮಲಾದೇವಿ ಚಟ್ಟೋಪಾಧ್ಯಾಯ ಜೀವನ ಚರಿತ್ರೆಯನ್ನೊಳಗೊಂಡಂತೆ ಹಲವು ಪುಸ್ತಕ ಪ್ರಕಟಿಸಿರುವ ಶಕುಂತಲಾ ನರಸಿಂಹನ್‌ರ ಬರವಣಿಗೆಯ ಬಲ್ಮೆ ಅಕ್ಷರಲೋಕವನ್ನು ಬೆಳಗಿದೆ. ರಾಜಕೀಯ, ಮಹಿಳಾ ಜಾಗೃತಿ, ನಾಗರಿಕ ಹಕ್ಕು ಮುಂತಾದ ಕ್ಷೇತ್ರಗಳಲ್ಲಿ ಜ್ವಲಂತ ವಿಷಯ ಕುರಿತು ಅವರ ಲೇಖನಿಯಿಂದ ಮೂಡಿರುವ ಸಕಾಲಿಕ ಬರಹಗಳಿಗಂತೂ ಲೆಕ್ಕವೇ ಇಲ್ಲ.

Writer - ವೆಂಕಟಲಕ್ಷ್ಮಿ ವಿ. ಎನ್.

contributor

Editor - ವೆಂಕಟಲಕ್ಷ್ಮಿ ವಿ. ಎನ್.

contributor

Similar News