ಮದುವೆ ನಿರಾಕರಿಸಿದ ಹೆತ್ತವರು: ಮನೆಗೆ ನುಗ್ಗಿ ಹುಡುಗಿಗೆ ಮಾರಣಾಂತಿಕ ಹಲ್ಲೆ ಮಾಡಿದ ಯುವಕನ ಬಂಧನ
ಹೈದರಾಬಾದ್,ಮಾ.4: ಮದುವೆಗೆ ನಿರಾಕರಿಸಿದ ಯುವತಿಯನ್ನು ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ ಯುವಕನನ್ನು ಶಾಹ್ ಅಲಿಬಂಡಾ ಪೊಲೀಸರು ಬಂಧಿಸಿದ್ದಾರೆ. ಆಸಿಫ್ ನಗರದ 26 ವರ್ಷದ ಮುಹಮ್ಮದ್ ಅಮ್ಜದ್ ಎಂಬಾತ ಅರ್ಶಿಯ ಎನ್ನುವ ಯುವತಿಯ ಮನೆಗೆ ಹೋಗಿ ಮದುವೆ ಪ್ರಸ್ತಾಪ ಇಟ್ಟಾಗ ಯುವತಿಯ ತಂದೆ ತಾಯಿ ನಿರಾಕರಿಸಿದ್ದರು.
ನಂತರ ಆತ ಅರ್ಶಿಯಾಳಿಗೆ ಹಲ್ಲೆ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ.ಹಲ್ಲೆಯಿಂದ ಯುವತಿಯನ್ನು ಪಾರು ಮಾಡಲು ಪ್ರಯತ್ನಿಸಿದ ಯುವತಿಯ ತಂದೆ ಮಜ್ದದ್ ಬಿನ್ ಅಬ್ದುಲ್ಲ ಕೂಡಾ ಗಾಯಗೊಂಡಿದ್ದಾರೆ. ನಂತರ ಹುಡುಗಿಯ ಸಂಬಂಧಿಕರು ಅಮ್ಜದ್‌ನ ಕಣ್ಣಿಗೆ ಮೆಣಸಿನ ಹುಡಿ ಎರಚಿ ಆತನನ್ನು ನಿಯಂತ್ರಿಸಿದ್ದಾರೆ.
ಎಸ್ಪಿ ಮುಹಮ್ಮದ್ ತಾಜುದ್ದೀನ್ ಅಹ್ಮದ್‌ರು, ಅಮ್ಜದ್ ಮತ್ತು ಅರ್ಶಿಯಾ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು, ಮದುವೆ ಪ್ರಸ್ತಾಪವನ್ನು ಅಮ್ಜದ್ ಇಟ್ಟಿದ್ದ. ಆದರೆ ಆತ ನಿರುದ್ಯೋಗಿ ಎನ್ನುವ ಕಾರಣದಿಂದ ಹುಡುಗಿಯನ್ನು ಕೊಡಲು ಅರ್ಶಿಯಾಳ ಹೆತ್ತವರು ಸಿದ್ಧರಿರಲಿಲ್ಲ ಎಂದು ತಿಳಿಸಿದ್ದಾರೆ.
ಹಲ್ಲೆಕೋರ ಅಮ್ಜದ್‌ನ ವಿರುದ್ಧ ಪೊಲೀಸರು 307, 354 ಕಲಂ ಪ್ರಕಾರ ಕೇಸು ದಾಖಲಿಸಿ ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ. ಆರೋಪಿಗೆ ಕೋರ್ಟು ರಿಮಾಂಡ್ ವಿಧಿಸಿದೆ ಎಂದು ವರದಿತಿಳಿಸಿದೆ.