ಧನುಷ್ ಯಾರ ಮಗ ?
ಚೆನ್ನೈ, ಮಾ.4: ತಮಿಳು ನಟ ಧನುಷ್ ಯಾರ ಮಗ ಎಂಬ ಪ್ರಶ್ನೆ ಈಗ ಎದ್ದಿದ್ದು, ಕೊಳವೇರಿ ಖ್ಯಾತಿಯ ಈ ನಟ ಕಲಿತ ಶಾಲೆಯ ಪ್ರಾಂಶುಪಾಲರು ತಾವು ಧನುಷ್ ಹೆತ್ತವರು ಎಂದು ಹೇಳಿಕೊಂಡು ಮುಂದೆ ಬಂದಿದ್ದ ದಂಪತಿಯ ವಾದವನ್ನು ಅಲ್ಲಗಳೆದಿದ್ದಾರೆ.
ಟೈಮ್ಸ್ ನೌ ವಾಹಿನಿಗೆ ಧನುಷ್ ಅವರ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ದೊರೆತಿದ್ದು, ಅದರಲ್ಲಿ ನಟನ ಹೆತ್ತವರ ಹೆಸರುಗಳನ್ನು ಸ್ಪಷ್ಟವಾಗಿ ನೀಡಲಾಗಿದೆ.
ಥಾಯಿ ಸತ್ಯ ಮ್ಯಾಟ್ರಿಕ್ಯುಲೇಶನ್ ಸ್ಕೂಲ್ ಇಲ್ಲಿನ ಪ್ರಿನ್ಸಿಪಾಲ್ ಸುಧಾ ವಿಜಯಕುಮಾರ್ ಪ್ರಕಾರ, ಧನುಷ್ ಅವರ ಶಾಲೆಯಲ್ಲಿ 1987ರಿಂದ 1999 ತನಕ ಎಲ್‌ಕೆಜಿಯಿಂದ ಹತ್ತನೇ ತರಗತಿಯ ವರೆಗೆ ಕಲಿತಿದ್ದು, ಆಗ ಅವರ ಹೆಸರು ವೆಂಕಟೇಶ್ ಪ್ರಭು ಆಗಿತ್ತು. ಅಲ್ಲದೆ, 10ನೇ ತರಗತಿಯಲ್ಲಿ ಅವರಿಗೆ 62ರಿಂದ 63 ಶೇಕಡ ಅಂಕಗಳು ದೊರೆತಿದ್ದವು. ಅವರ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟಿನಲ್ಲಿ ಅವರ ತಾಯಿ ಕೆ.ವಿಜಯಲಕ್ಷ್ಮಿ ಅವರ ಸಹಿ ಇರುವುದನ್ನೂ ಅವರು ತೋರಿಸಿದ್ದಾರೆ.
ಹಿರಿಯ ದಂಪತಿಯಾದ ಕಥಿರೇಸನ್ ಹಾಗೂ ಮೀನಾಕ್ಷಿ ಎಂಬವರು ಧನುಷ್ ತಮ್ಮ ಪುತ್ರನೆಂದು ಹೇಳಿಕೊಂಡು ಮುಂದೆ ಬಂದಂದಿನಿಂದ ನಟನ ನಿಜ ಹೆತ್ತವರು ಯಾರು ಎಂಬ ಪ್ರಶ್ನೆ ಎದ್ದಿತ್ತು.
ಈ ಬಗ್ಗೆ ದೃಢೀಕರಿಸಲು ಡಿಎನ್ ಎ ಪರೀಕ್ಷೆಗೆ ಅನುಮತಿಸುವಂತೆ ಕೋರಿ ಈ ದಂಪತಿ ಮಾಡಿದ ಅಪೀಲನ್ನು ನ್ಯಾಯಾಲಯ ಮಾರ್ಚ್ 8ರಂದು ವಿಚಾರಣೆ ನಡೆಸಲಿದೆ. ಫೆಬ್ರವರಿ 28ರಂದು ನಟ ತನ್ನ ಹೆತ್ತವರಾದ ವಿಜಯಲಕ್ಷ್ಮಿ ಮತ್ತು ಕಸ್ತೂರಿ ರಾಜಾ ಅವರೊಂದಿಗೆ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಆದರೆ ತಾವೇ ಧನುಷ್ ನಿಜವಾದ ಹೆತ್ತವರೆಂದು ಹೇಳಿಕೊಂಡ ದಂಪತಿ, ಧನುಷ್ ತಂದೆ ತಾಯಿ ಕೋರ್ಟಿನ ಮುಂದೆ ಸಲ್ಲಿಸಿದ ದಾಖಲೆಗಳು ನಕಲಿ ಎಂದು ವಾದಿಸಿದ್ದರು. ಅಲ್ಲದೆ, ಧನುಷ್ ತಮ್ಮ ಮೂರನೇ ಪುತ್ರ ಹಾಗೂ ತಮಗೆ ಮಾಸಿಕ ರೂ.65,000 ಜೀವನಾಂಶ ನೀಡಬೇಕೆಂದು ಹೇಳಿದ್ದರಲ್ಲದೆ, ಧನುಷ್ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಓಡಿ ಹೋಗಿ ಚಿತ್ರರಂಗ ಸೇರಿದ್ದಾರೆಂದೂ ಹೇಳಿಕೊಂಡಿದ್ದರು.