ಮತ್ತೆ ಸರ್ಕಾರ್ ಆಡಳಿತ
ಬಾಳಾಠಾಕ್ರೆಯ ಯುಗ ಮುಂಬೈಯಲ್ಲಿ ಮುಗಿದು ಹಲವು ವರ್ಷಗಳು ಸಂದಿವೆಯಾದರೂ, ಅವರ ಸ್ಫೂರ್ತಿಯಿಂದ ಕೆತ್ತಲ್ಪಟ್ಟ ಪಾತ್ರ ‘ಸುಭಾಶ್ ನಾಗ್ರೆ’ಯ ಆಡಳಿತ ಮಾತ್ರ ಮುಂದುವರಿಯುತ್ತಲೇ ಇದೆ. ಬಾಳಾಠಾಕ್ರೆಯ ಬದುಕನ್ನು ಆಧರಿಸಿ ಅಥವಾ ಅದಕ್ಕೆ ಬಹಳಷ್ಟು ರೋಚಕತೆಯನ್ನು ಸೇರಿಸಿ ರಾಮ್‌ಗೋಪಾಲ್ ವರ್ಮಾ ‘ಸರ್ಕಾರ್’ ಮಾಡಿದಾಗ ಅದು ಈ ಪರಿಯ ಯಶಸ್ಸು ಕಾಣುತ್ತದೆ ಎಂದು ಅವರು ನಿರೀಕ್ಷಿಸಿರಲಿಲ್ಲ.
ಇಂದು ಮುಂಬೈಯ ಜನರು ಠಾಕ್ರೆಯನ್ನು ಮರೆತಿದ್ದಾರಾದರೂ, ಅಮಿತಾಭ್ ಬಚ್ಚನ್ ನಿರ್ವಹಿಸಿರುವ ನಾಗ್ರೆಯನ್ನು ಮರೆತಿಲ್ಲ. ಪರಿಣಾಮವಾಗಿಯೇ ಇದೀಗ ಸರ್ಕಾರ್ ಭಾಗ 3 ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಹಿಂದಿನ ಎರಡೂ ಭಾಗಗಳಲ್ಲಿ ಸುಭಾಶ್ ನಾಗ್ರೆ ತನ್ನ ಎರಡೂ ಮಕ್ಕಳನ್ನು ಕಳೆದುಕೊಳ್ಳುತ್ತಾನೆ. ಈ ಬಾರಿ ನಾಗ್ರೆಯ ಜೊತೆ ನಿಲ್ಲುವವರು ಯಾರು? ಉತ್ತರ ಸಿದ್ಧವಿದೆ.
ಅಮಿತ್ ಸಾದ್ ಇದೀಗ ಅಭಿಷೇಕ್ ಬಚ್ಚನ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಶಿವಾಜಿಯಾಗಿ ತನ್ನ ತಾತನ ಜೊತೆಗೆ ಈತ ಕಾಣಿಸಿಕೊಳ್ಳಲಿದ್ದಾನೆ. ಮೊದಲ ಸರ್ಕಾರ್‌ಗೆ ಹೋಲಿಸಿದರೆ ಎರಡನೆ ಸರ್ಕಾರ್ ತೀವ್ರತೆಯಲ್ಲಿ ಸೋಲುತ್ತದೆ. ಮೊದಲ ಚಿತ್ರದಲ್ಲಿ ಚಿತ್ರಕತೆಯ ಗಾಂಭೀರ್ಯ ಎರಡನೆ ಭಾಗದಲ್ಲಿ ಕಾಣಿಸಿಕೊಂಡಿಲ್ಲ. ಮುಖ್ಯವಾಗಿ ಚಿತ್ರದಲ್ಲಿ ಐಶ್ವರ್ಯ ರೈ ನಿರ್ವಹಿಸಿದ ಪಾತ್ರ ಅಭಿಷೇಕ್ ಬಚ್ಚನನ್ನು ಹಿಂದೆ ಸರಿಸಿತ್ತು. ಈ ಬಾರಿ ಅಮಿತ್ ಸಾದ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
ಸರ್ಕಾರ್ ಸರಣಿಯ ಕುರಿತಂತೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಅಪಾರ ಭರವಸೆಯಲ್ಲಿದ್ದಾರೆ. ಇತ್ತೀಚೆಗೆ ಅವರ ಚಿತ್ರಗಳು ಹಿಂದಿನ ಮಾಂತ್ರಿಕತೆಯನ್ನು ಕಳೆದುಕೊಂಡಿದೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಮೂರನೆ ಸರ್ಕಾರ್ ಹೇಗೆ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕು. ಈ ಚಿತ್ರದಲ್ಲಿ ರಾಮ್‌ಗೋಪಾಲ್ ವರ್ಮಾ ಅವರ ಭವಿಷ್ಯವೇ ನಿಂತಿದೆ. ಒಂದು ವೇಳೆ ಈ ಚಿತ್ರವೇನಾದರೂ ಸೋತರೆ, ಮತ್ತೆ ಬಾಲಿವುಡ್ ಅವರನ್ನು ಸ್ವೀಕರಿಸುವುದು ಕಷ್ಟ.
ಅಮಿತಾಭ್ ಬಚ್ಚನ್ ಅವರ ಜೊತೆಗೆ ಮಾಡಿದ ಚಿತ್ರಗಳ ಕುರಿತಂತೆ ಹೆಮ್ಮೆಪಡುವ ವರ್ಮಾ, ಸರ್ಕಾರ್ ಚಿತ್ರದಲ್ಲಿ ಮಾತ್ರ ಅಮಿತಾಭ್ ಬಚ್ಚನ್‌ಗೆ ನಾನು ನ್ಯಾಯ ನೀಡಿದ್ದೇನೆ ಎನ್ನುತ್ತಾರೆ. ಅವರ ಜೊತೆಗೆ ಮಾಡಿದ ಉಳಿದೆಲ್ಲ ಚಿತ್ರಗಳ ಬಗ್ಗೆ ನನಗೆ ಪಶ್ಚಾತ್ತಾಪವಿದೆ ಎಂದೂ ಹೇಳಿಕೊಳ್ಳುತ್ತಾರೆ.