ಪಾಕ್‌ನ ಈ ಹೊಟೇಲ್‌ನಲ್ಲಿ ವೇಟರ್ ರೊಬೊಟ್‌ಗಳು

Update: 2017-03-04 16:12 GMT

ಇಸ್ಲಾಮಾಬಾದ್, ಮಾ.4: ಪಾಕಿಸ್ತಾನದ ಫಾಸ್ಟ್‌ಪುಡ್ ರೆಸ್ಟಾರೆಂಟೊಂದು, ಗ್ರಾಹಕರಿಗೆ ಆಹಾರವನ್ನು ಬಡಿಸಲು ರೊಬೊಟ್‌ಗಳನ್ನು ಬಳಸಿಕೊಳ್ಳುವ ಮೂಲಕ ಹೊಸ ದಾಖಲೆ ಸ್ಥಾಪಿಸಿದೆ.

  ಪಂಜಾಬ್ ಪ್ರಾಂತದ ಮುಲ್ತಾನ್ ನಗರದಲ್ಲಿರುವ ಪಿಝಾ.ಕಾಂ. ಉಪಹಾರಗೃಹವು ಆಹಾರ ಬಡಿಸಲು ರೊಬೊಟ್ ಪರಿಚಾರಕರನ್ನು ಬಳಸಿಕೊಂಡಿದೆ. ಇದರಿಂದಾಗಿ ಅಲ್ಲಿಗೆ ಆಗಮಿಸುತ್ತಿರುವ ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಪಾಕಿಸ್ತಾನದಲ್ಲಿ ರೊಬೊಟೊನ್ನು ಬಳಸಿಕೊಂಡಿರುವ ಪ್ರಪ್ರಥಮ ಉಪಹಾರಗೃಹವೆಂಬ ಹೆಗ್ಗಳಿಕೆಗೂ ಪಿಝಾ.ಕಾಂ. ಪಾತ್ರವಾಗಿದೆ.

ಈ ರೆಸ್ಟಾರೆಂಟ್‌ನ ಮಾಲಕನ ಪುತ್ರ ಇಸ್ಲಾಮಾಬಾದ್‌ನ ರಾಷ್ಟ್ರೀಯ ವಿಜ್ಞಾನ ಹಾಗೂ ತಂತ್ರಜ್ಞಾನ ವಿವಿಯ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರನಾಗಿದ್ದು, ಅವರು ಈ ರೊಬೊಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ‘‘ಸ್ತ್ರೀಯಾಕೃತಿಯ ಈ ರೊಬೊಟ್‌ಗಳ ಕುರಿತ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದ್ದೇ ತಡ, ರೆಸ್ಟಾರೆಂಟ್‌ನ ಮುಂದೆ ಗ್ರಾಹಕರ ಉದ್ದನೆಯ ಸರತಿ ಸಾಲುಗಳು ಈಗ ಸಾಮಾನ್ಯ ದೃಶ್ಯವಾಗಿ ಬಿಟ್ಟಿದೆಯೆಂದು, ಮಾಲಕ ಸೈಯದ್ ಅಝೀಝ್ ಝಾಫ್ರಿ ಹೇಳುತ್ತಾರೆ.

 ತನ್ನ ವ್ಯಾಪಾರಕ್ಕೆ ಉತ್ತೇಜನ ನೀಡಲು ರೊಬೊಟ್ ಪರಿಚಾರಕರ ಬಳಸಿಕೊಳ್ಳಬೇಕೆಂಬ ವಿನೂತನ ಐಡಿಯಾವನ್ನು ಪುತ್ರ ಸೈಯದ್ ಉಸಾಮಾ ಅಝೀಜ್ ನೀಡಿದರೆಂದು ಝಾಫ್ರಿ ಹೇಳುತ್ತಾರೆ. ‘‘ ನನ್ನ ಪುತ್ರ ಹೆಚ್ಚಿನ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಲು ಇಚ್ಛಿಸಿದ್ದ. ನಾನವನಿಗೆ ದೇಶಕ್ಕಾಗಿ ಅದರಲ್ಲೂ ವಿಶೇಷವಾಗಿ ಮುಲ್ತಾನ್‌ಗಾಗಿ ಏನನ್ನಾದರೂ ಕೊಡುಗೆ ನೀಡುವಂತೆ ಆತನನ್ನು ಪ್ರೇರೇಪಿಸಿದೆ’’ಎಂದು ಜಾಫ್ರಿ ಹೇಳುತ್ತಾರೆ.

 ಈ ರೊಬೊಟ್‌ಗಳು ಗ್ರಾಹಕರ ಟೇಬಲ್ ಸಮೀಪಕ್ಕೆ ಬರಬಲ್ಲವು, ಗ್ರಾಹಕರನ್ನು ಸ್ವಾಗತಿಸುವವು ಹಾಗೂ ಅವರಿಗೆ ಊಟವನ್ನು ತಂದುಕೊಡುತ್ತವೆ. ಜೊತೆಗೆ ಕೌಂಟರ್ ಬಳಿಗೂ ಬರುತ್ತವೆಯೆಂದು ಈ ಯಂತ್ರಮಾನವರನ್ನು ಅಭಿವೃದ್ಧಿಪಡಿಸಿದವರಾದ ಜಾಫ್ರಿ ಹೇಳುತ್ತಾರೆ.

ಚೀನಾದಲ್ಲಿ ಈಗಾಗಲೇ ಹಲವೆಡೆ ಹೊಟೇಲ್‌ಗಳಲ್ಲಿ ರೊಬೊಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಂದ ತಾನು ಸ್ಫೂರ್ತಿ ಪಡೆದು ಈ ಯಂತ್ರಮಾನವರನ್ನು ನಿರ್ಮಿಸಿರುವುದಾಗಿ ಝಾಫ್ರಿ ಹೇಳುತ್ತಾರೆ. ಈ ರೊಬೊಟ್‌ಗಳಲ್ಲಿನ ಎಲ್ಲಾ ಇಲೆಕ್ಟಿಕಲ್ ಹಾಗೂ ಯಾಂತ್ರಿಕ ಬಿಡಿಭಾಗಗಳು ಪಾಕಿಸ್ತಾನದಲ್ಲೇ ನಿರ್ಮಾಣಗೊಂಡಿರುವುದಾಗಿ ಅವರ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News