ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆ, ಭಷ್ಟಾಚಾರ ಭಾರತದ ಪ್ರಮುಖ ಮಾನವಹಕ್ಕು ಸಮಸ್ಯೆಗಳು: ಅಮೆರಿಕ

Update: 2017-03-04 16:34 GMT

 ವಾಶಿಂಗ್ಟನ್,ಮಾ.4: ್ಲ ವಿದೇಶಗಳಿಂದ ಆರ್ಥಿಕ ನೆರವು ಪಡೆಯುತ್ತಿರುವ ಎನ್‌ಜಿಓ ಸಂಸ್ಥೆಗಳ ವಿರುದ್ಧ ನಿರ್ಬಂಧಗಳ ಹೇರಿಕೆ, ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆ, ಭ್ರಷ್ಟಾಚಾರ ಹಾಗೂ ಭದ್ರತಾ ಪಡೆಗಳ ಮೇಲಿನ ದೌರ್ಜನ್ಯ ಇವು ಭಾರತ ಎದುರಿಸುತ್ತಿರುವ ಅತ್ಯಂತ ಮಹತ್ವದ ಮಾನವಹಕ್ಕು ಸಮಸ್ಯೆಗಳಾಗಿವೆಯೆಂದು ಅಮೆರಿಕ ಬೆಟ್ಟು ಮಾಡಿದೆ.

   ಅಮೆರಿಕವು ಗುರುವಾರ ಪ್ರಕಟಿಸಿದ 2016ನೆ ಸಾಲಿ ವಾರ್ಷಿಕ ಮಾನವಹಕ್ಕುಗಳ ಕುರಿತ ರಾಷ್ಟ್ರವಾರು ವರದಿಯು ತಿಳಿಸಿದೆ. ನಾಗರಿಕರ ನಿಗೂಢ ನಾಪತ್ತೆ, ಜೈಲುಗಳಲ್ಲಿ ನ ಅಪಾಯಕಾರಿ ಪರಿಸ್ಥಿತಿ ಹಾಗೂ ನ್ಯಾಯಾಲಯದಲ್ಲಿ ಮಂದಗತಿಯ ವಿಚಾರಣೆಯಿಂದಾಗಿ ನ್ಯಾಯದಾನದಲ್ಲಿ ವಿಳಂಬ ಇವು ಕೂಡಾ ಭಾರತದಲ್ಲಿನ ಇತರ ಕೆಲವು ಪ್ರಮುಖ ಮಾನವಹಕ್ಕು ಸಮಸ್ಯೆಗಳೆಂದು ವರದಿಯು ಪಟ್ಟಿ ಮಾಡಿದೆ. ಟ್ರಂಪ್ ಆಡಳಿತದಲ್ಲಿ ಅಮೆರಿಕ ಬಿಡುಗಡೆಗೊಳಿಸಿದ ಪ್ರಪ್ರಥಮ ಮಾನವಹಕ್ಕುಗಳ ಕುರಿತ ವರದಿ ಇದಾಗಿದೆ.

  ಪೊಲೀಸ್ ಹಾಗೂ ಭದ್ರತಾಪಡೆಗಳಿಂದ ನ್ಯಾಯಾಂಗೇತರ ಹತ್ಯೆಗಳು, ದಬ್ಬಾಳಿಕೆ ಹಾಗೂ ಅತ್ಯಾಚಾರ ಭಾರತದಲ್ಲಿ ವ್ಯಾಪಕವಾಗಿದೆಯೆಂದು ವರದಿ ಹೇಳಿದೆ. ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ/ಪಂಗಡಗಳ ಸದಸ್ಯರ ವಿರುದ್ಧ ನಡೆಯುವ ಅಪರಾಧಗಳು, ಲಿಂಗ,ಧಾರ್ಮಿಕ ನಿಷ್ಠೆ, ಜಾತಿ ಅಥವಾ ಪಂಗಡಗಳನ್ನು ಆಧರಿಸಿ ನಡೆಯುವ ಸಾಮಾಜಿಕ ಹಿಂಸಾಚಾರಗಳು ಇವು ಭಾರತವನ್ನು ಕಾಡುತ್ತಿರುವ ಪಿಡುಗುಗಳಾಗಿವೆಯೆಂದು ಅದು ಹೇಳಿದೆ.

     ಸರಕಾರೇತರ ಸಂಸ್ಥೆಗಳ ಮೇಲೆ ವಿದೇಶಿ ದೇಣಿಗೆ ಹರಿದುಬರುವುದನ್ನು ನಿರ್ಬಂಧಿಸಿರುವ ಕೇಂದ್ರ ಸರಕಾರದ ನೀತಿಯನ್ನೂ ವರದಿ ಖಂಡಿಸಿದೆ. ಇದು ದೇಶದ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿಲ್ಲವೆಂದು ಅದು ಅಭಿಪ್ರಾಯಿಸಿದೆ. ಭಾರತದ ಆರು ರಾಜ್ಯಗಳಲ್ಲಿರುವ ಕಾನೂನುಗಳು ಧಾರ್ಮಿಕ ಮತಾಂತರಕ್ಕೆ ನಿರ್ಬಂಧಗಳನ್ನು ವಿಧಿಸಿದ್ದು, ಇದು ವ್ಯಕ್ತಿ ಸ್ವಾತಂತ್ರದ ಉಲ್ಲಂಘನೆಯಾಗಿದೆಯೆಂದು ವರದಿ ತಿಳಿಸಿದೆ. ಈ ಕಾನೂನಿನಡಿ ಬಂಧನಗಳಾಗಿವೆಯಾದರೂ, ಬಂಧಿತರನ್ನು ದೋಷಿಗಳೆಂದು ನಿರೂಪಿಸಲು ಸಾಧ್ಯವಾಗಿಲ್ಲವೆಂದು ಅದು ಕಳವಳ ವ್ಯಕ್ತಪಡಿಸಿದೆ.

ಅತ್ಯಾಚಾರ, ಗೃಹಹಿಂಸೆ, ವರದಕ್ಷಿಣೆ ಹತ್ಯೆ, ಮರ್ಯಾದಾ ಹತ್ಯೆ, ಲೈಂಗಿಕ ಕಿರುಕುಳ ಹಾಗೂ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ತಾರತಮ್ಯ ಇವು ಗಂಭೀರವಾದ ಸಾಮಾಜಿಕ ಸಮಸ್ಯೆಗಳಾಗಿವೆ. ಮಕ್ಕಳು ವಯಸ್ಸರನ್ನು ಜೀತದಲ್ಲಿ ದುಡಿಸುವುದು, ಮಹಿಳೆಯರು,ಮಕ್ಕಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುವುದು ಇವು ಭಾರತವನ್ನು ಕಾಡುತ್ತಿರುವ ಇತರ ಗಂಭೀರ ಸಮಸ್ಯೆಗಳೆಂದು ವರದಿ ತಿಳಿಸಿದೆ.

 ಜಮ್ಮುಕಾಶ್ಮೀರ,ಈಶಾನ್ಯ ಭಾರತದ ರಾಜ್ಯಗಳ ಪ್ರತ್ಯೇಕವಾದಿಗಳು ಮತ್ತು ಮಾವೋವಾದಿಗಳ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಭದ್ರತಾಪಡೆಗಳಿಂದ ಕಗ್ಗೊಲೆಗಳು ಸೇರಿದಂತೆ ನಾಗರಿಕರ ಮೇಲೆ ಗಂಭೀರವಾದ ದೌರ್ಜನ್ಯಗಳು ನಡೆಯುತ್ತಿವೆ ಎಂದು ವರದಿ ಗಮನಸೆಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News