ಗಡಿ ಪ್ರದೇಶಗಳಲ್ಲಿ ಹೆಣ್ಣುಭ್ರೂಣ ಹತ್ಯೆ ತಡೆಗೆ ಕರ್ನಾಟಕದ ನೆರವು ಕೋರಲಿರುವ ಮಹಾರಾಷ್ಟ್ರ
ಮುಂಬೈ,ಮಾ.6: ಹೆಣ್ಣು ಭ್ರೂಣ ಹತ್ಯೆಗಾಗಿ ಮಹಿಳೆಯರನ್ನು ಗಡಿಪ್ರದೇಶಗಳಲ್ಲಿಯ ಪಟ್ಟಣಗಳಿಗೆ ಕರೆದೊಯ್ಯುವುದನ್ನು ತಡೆಯಲು ಜಂಟಿ ಪ್ರಯತ್ನಗಳ ಅಗತ್ಯದ ಕುರಿತು ಮಹಾರಾಷ್ಟ್ರ ಸರಕಾರವು ಕರ್ನಾಟಕದೊಂದಿಗೆ ಚರ್ಚಿಸಲಿದೆ. ಕರ್ನಾಟಕ್ಕೆ ಹೊಂದಿ ಕೊಂಡಿರುವ ಸಾಂಗ್ಲಿ ಜಿಲ್ಲೆಯ ಗ್ರಾಮದ ತೊರೆಯೊಂದರಲ್ಲಿ ರವಿವಾರ 19 ಹೆಣ್ಣು ಭ್ರೂಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗಡಿಯಾಚೆಯ ಗರ್ಭಪಾತ ಜಾಲ ವೊಂದು ಕಾರ್ಯನಿರತವಾಗಿರುವ ಬಗ್ಗೆ ಸರಕಾರವು ಶಂಕಿಸಿದೆ.
ಮಹಾರಾಷ್ಟ್ರ ಆರೋಗ್ಯ ಸಚಿವ ದೀಪಕ ಸಾವಂತ್ ಅವರು ಸೋಮವಾರ ಸುದ್ದಿಸಂಸ್ಥೆಗೆ ಈ ವಿಷಯ ತಿಳಿಸಿದರು.
ಗರ್ಭಪಾತದ ವೇಳೆ 28ರ ಹರೆಯದ ಗರ್ಭಿಣಿಯೋರ್ವಳು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಪೊಲೀಸರು ರವಿವಾರ ಸಾಂಗ್ಲಿ ಜಿಲ್ಲೆಯ ಮ್ಹಾಯಿಸಲ್ ಗ್ರಾಮದ ತೊರೆಯಲ್ಲಿ 19 ಹೆಣ್ಣುಭ್ರೂಣಗಳನ್ನು ಪತ್ತೆ ಹಚ್ಚಿದ್ದರು. ಈ ಪ್ರಕರಣ ಗರ್ಭಪಾತ ಜಾಲವನ್ನು ಬೆಳಕಿಗೆ ತಂದಿದೆ ಎಂದು ಸಾಂಗ್ಲಿ ಪೊಲೀಸ್ ಅಧೀಕ್ಷಕ ದತ್ತಾತ್ರೇಯ ಶಿಂಧೆ ಅವರು ಹೇಳಿದ್ದರು.
ಮೂರನೇ ಬಾರಿಗೆ ಗರ್ಭದಲ್ಲಿ ಹೆಣ್ಣುಭ್ರೂಣವನ್ನು ಹೊತ್ತಿದ್ದ ಮಹಿಳೆಯನ್ನು ಆಕೆಯ ಪತಿ ಗರ್ಭಪಾತಕ್ಕಾಗಿ ಹೋಮಿಯೊಪತಿ ವೈದ್ಯನೋರ್ವನ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ಗರ್ಭಪಾತದ ವೇಳೆ ಆಕೆ ಸಾವನ್ನಪ್ಪಿದ್ದಳು. ಈ ಬಗ್ಗೆ ಗ್ರಾಮಸ್ಥರು ಪೊಲಿಸರಲ್ಲಿ ದೂರಿಕೊಂಡಾಗ ಜಾಲವು ಬಯಲಿಗೆಳೆಯಲ್ಪಟ್ಟಿತ್ತು. ಪರಾರಿಯಾಗಿರುವ ವೈದ್ಯನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ವಿಷಯದಲ್ಲಿ ತನಿಖೆ ನಡೆಸಲು ಮತ್ತು ಗರ್ಭಪಾತದ ಅನಿಷ್ಟ ಪದ್ಧತಿಯನ್ನು ತಡೆಯಲು ವಿವಿಧ ಇಲಾಖೆಗಳ ಸಮನ್ವಯಕ್ಕಾಗಿ ಮುಖ್ಯ ಕಾರ್ಯದರ್ಶಿ ಸುಮಿತ್ ಮಲಿಕ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ತಿಳಿಸಿದ ಸಾವಂತ್, ಮಹಾರಾಷ್ಟ್ರದ ಮಹಿಳೆಯರನ್ನು ಗರ್ಭಪಾತಕ್ಕಾಗಿ ಕರ್ನಾಟಕದ ಗಡಿ ಪ್ರದೇಶಗಳಿಗೆ ಕರೆದೊಯ್ಯುತ್ತಿರುವ ನಿದರ್ಶನಗಳಿವೆ. ಮಹಾರಾಷ್ಟ್ರ ಪೊಲೀಸರು ನೇರವಾಗಿ ಅಲ್ಲಿಗೆ ಹೋಗಿ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದರು.