×
Ad

ಈ ಸಂಜಯ್ ಗಾಂಧಿ ಪಾತ್ರಧಾರಿ ಯಾರೆಂದು ಗುರುತಿಸಬಲ್ಲಿರಾ ?

Update: 2017-03-06 21:58 IST

ಮುಂಬೈ,ಮಾ. 6 : ಇತ್ತೀಚಿಗೆ  ರುಕ್ಮಿಣಿ ಸಹಾಯ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ನೀಲ್ ನಿತಿನ್ ಮುಖೇಶ್ ಮಧುರ್ ಭಂಡಾರ್ಕರ್ ಅವರ ಮುಂದಿನ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಆದರೆ ಇದು ಅಂತಿಂತಹ ಚಿತ್ರವೂ ಅಲ್ಲ , ಪಾತ್ರವೂ ಅಲ್ಲ. ಚಿತ್ರದ ಹೆಸರು ಇಂದು ಸರ್ಕಾರ್ . ಸೆಟ್ ನಿಂದ ಸೋರಿಕೆಯಾಗಿರುವ ಚಿತ್ರವೊಂದರಲ್ಲಿ ಕಾಣುವುದು ನಿಜವಾಗಿದ್ದರೆ ನೀಲ್ ಈ ಚಿತ್ರದಲ್ಲಿ ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

ಸಂಜಯ್ ತನ್ನ ತಾಯಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕಿವಿಯಲ್ಲಿ ಏನನ್ನೋ ಉಸುರುತ್ತಿರುವ ಎಲ್ಲರೂ ನೋಡಿರುವ ಚಿತ್ರದ ಯಥಾಪ್ರತಿ ಈ ಚಿತ್ರದ ಸೆಟ್ ನಿಂದ ಈಗ ಸೋರಿಕೆಯಾಗಿದೆ. ಇದರಲ್ಲಿ ರೂಪ, ಉಡುಪು , ಹಾವಭಾವದಲ್ಲಿ  ಥೇಟ್ ಸಂಜಯ್ ರನ್ನೇ ಹೋಲುವ ನೀಲ್ , ಇಂದಿರಾ ಪಾತ್ರಧಾರಿ ಸುಪ್ರಿಯಾ ವಿನೋದ್ ಕಿವಿಯಲ್ಲಿ ಏನನ್ನೋ ಹೇಳುತ್ತಿರುವುದು ಕಾಣುತ್ತದೆ. ಮುಂಬೈ ಮಿರರ್ ಈ ಬಗ್ಗೆ ವರದಿ ಮಾಡಿದೆ. 

ಚಿತ್ರದಲ್ಲಿ ನೇರವಾಗಿ ಇಂದಿರಾ ಗಾಂಧಿ ಹಾಗು ಅವರ ಕುಟುಂಬದ ಬಗ್ಗೆ ಹೇಳುತ್ತಾರಾ ಎಂದು ಖಚಿತವಿಲ್ಲದಿದ್ದರೂ ಈ ಚಿತ್ರ ಮಾತ್ರ ಥೇಟ್ ಇಂದಿರಾ ಕತೆಯನ್ನೇ ಹೋಲುವ ಸಂಪೂರ್ಣ ಸೂಚನೆ ನೀಡುತ್ತಿದೆ. 

1975 ರಿಂದ  1977 ರವರೆಗೆ 21 ತಿಂಗಳ ತುರ್ತು ಪರಿಸ್ಥಿತಿಯ ಸಂದರ್ಭದ ಕುರಿತು ಚಿತ್ರ ಬೆಳಕು ಚೆಲ್ಲಲಿದೆ ಎಂದು ಹೇಳಲಾಗಿದ್ದು ಆ ಸಂದರ್ಭದ ಇಂದಿರಾ ಅವರ  ತೀರ್ಮಾನಗಳಲ್ಲಿ  ಸಂಜಯ್ ವಹಿಸಿದ ಪಾತ್ರದ ಬಗ್ಗೆ ಚಿತ್ರದಲ್ಲಿರುತ್ತದೆ ಎಂದು ಊಹಾಪೋಹಗಳಿವೆ. 

ಅನು ಮಲಿಕ್ ಹಾಗು ಬಪ್ಪಿ ಲಾಹಿರಿ ಜೋಡಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದೆ. ನೀಲ್ ನಿತಿನ್ ಅವರನ್ನು ಸಂಜಯ್ ಗಾಂಧಿ ಅವರಂತೆಯೇ ಕಾಣುವಂತೆ ಮಾಡಲು ಸುಮಾರು ಎಂಟು ತಿಂಗಳು ಶ್ರಮ ಹಾಕಲಾಗಿದೆ ಎಂದು ಹೇಳಲಾಗಿದೆ. 

45 ದಿನಗಳಲ್ಲಿ ಇಂದು ಸರ್ಕಾರ್ ಚಿತ್ರೀಕರಣ ಪೂರ್ಣಗೊಳ್ಳಲಿದ್ದು ಇದೇ ವರ್ಷ ಚಿತ್ರ ಬಿಡುಗಡೆಯಾಗಲಿದೆ. 

ಕೃಪೆ http://mumbaimirror.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News