ಪನಾಮಾ ದಾಖಲೆಗಳ ಪ್ರಕರಣ: ಎಂಎಜಿ ವರದಿಗಳ ಸಲ್ಲಿಕೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2017-03-07 14:22 GMT

ಹೊಸದಿಲ್ಲಿ,ಮಾ,7: ಪನಾಮಾ ದಾಖಲೆಗಳ ಪ್ರಕರಣದ ತನಿಖೆಗಾಗಿ ಸರಕಾರವು ರಚಿಸಿದ್ದ ಬಹು ಇಲಾಖಾ ತಂಡ(ಎಂಎಜಿ)ದ ಎಲ್ಲ ಆರು ವರದಿಗಳನ್ನು ನಾಲ್ಕು ವಾರಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ತನಗೆ ಸಲ್ಲಿಸುವಂತೆ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ವುಂಗಳವಾರ ಕೇಂದ್ರಕ್ಕೆ ಸೂಚಿಸಿತು.

ಇದಕ್ಕೂ ಮುನ್ನ ಎಂಎಜಿಯು ತನ್ನ ಆರನೇ ವರದಿಯನ್ನು ಪೂರ್ಣಗೊಳಿಸಿದ್ದು, ಎಲ್ಲ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ತಾನು ಸಿದ್ಧವಿರುವುದಾಗಿ ಕೇಂದ್ರವು ತಿಳಿಸಿತ್ತು.

 ಪನಾಮಾ ದಾಖಲೆಗಳ ತನಿಖೆಗಾಗಿ ಸರಕಾರವು ಕೇಂದ್ರ ನೇರ ತೆರಿಗೆಗಳ ಮಂಡಳಿ, ಆರ್‌ಬಿಐ, ಜಾರಿ ನಿರ್ದೇಶನಾಲಯ ಮತ್ತು ಹಣಕಾಸು ಗುಪ್ತಚರ ಘಟಕ ಇವುಗಳ ಅಧಿಕಾರಿಗಳನೊ್ನಳಗೊಂಡ ತಂಡವನ್ನು ರಚಿಸಿತ್ತು.

 ವರದಿಗಳನ್ನು ತನಗೂ ನೀಡಬೇಕು ಎಂದು ಅರ್ಜಿದಾರರಾದ ವಕೀಲ ಎಂ.ಎಲ್. ಶರ್ಮಾ ಕೋರಿದಾಗ, ನ್ಯಾಯಾಲಯವು ಮೊದಲು ಎಎಂಜಿ ವರದಿಗಳನ್ನು ಪರಿಶೀಲಿಸಬೇಕು ಮತ್ತು ಬಳಿಕ ಅವುಗಳನ್ನು ಅರ್ಜಿದಾರರೊಂದಿಗೆ ಹಂಚಿಕೊಳ್ಳಬಹುದೇ ಇಲ್ಲವೇ ಎನ್ನುವುದನ್ನು ನಿರ್ಧರಿಸಬೇಕು ಎಂದು ಕೇಂದ್ರದ ಪರ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ಪೀಠಕ್ಕೆ ತಿಳಿಸಿದರು.

 ವಿದೇಶಗಳಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆಂದು ಪನಾಮಾ ದಾಖಲೆಗಳಲ್ಲಿ ಹೆಸರಿಸಲಾಗಿರುವ ವ್ಯಕ್ತಿಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ನಿಗಾದಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಶರ್ಮಾ ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News