×
Ad

ಮೋದಿ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ತುರ್ತು ನಿಧಿಯಿಂದ 8 ಕೋಟಿ ರೂ. ಖರ್ಚು ಮಾಡಿದ ಮಹಾರಾಷ್ಟ್ರ

Update: 2017-03-07 20:29 IST

 ಮುಂಬೈ,ಮಾ.7: ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ವಿವಿಧ ಯೋಜನೆಗಳ ಶಿಲಾನ್ಯಾಸ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಮಹಾರಾಷ್ಟ್ರ ಸರಕಾರವು ತನ್ನ ತುರ್ತುನಿಧಿಯಿಂದ 8 ಕೋಟಿ ರೂ.ಖರ್ಚು ಮಾಡಿತ್ತು. ಡಿಸೆಂಬರ್ 24ರಂದು ಪ್ರಧಾನಿ ಮೋದಿ ಮುಂಬೈನ ಅರಬಿಸಮುದ್ರದ ಬಂಡೆಯಲ್ಲಿ ನಿರ್ಮಿಸಲಾಗುವ ಛತ್ರಪತಿ ಶಿವಾಜಿ ಸ್ಮಾರಕ ದ ಶಿಲಾನ್ಯಾದ ವೇಳೆ ನಡೆದ ‘ಜಲಪೂಜನ್’ಕಾರ್ಯಕ್ರಮ ಕೂಡಾ ಇದರಲ್ಲಿ ಒಳಗೊಂಡಿದೆ ಎಂದು ಮಹಾರಾಷ್ಟ್ರದ ಲೋಕೋಪಯೋಗಿ ಇಲಾಖೆ ಬುಧವಾರ ತಿಳಿಸಿದೆ.

 ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ಹಣಕಾಸು ಇಲಾಖೆಯು ಮಂಡಿಸಿದ ಅನುದಾನಗಳಿಗಾಗಿನ ಪೂರಕ ಬೇಡಿಕೆಯಲ್ಲಿ ಲೋಕೋಪಯೋಗಿ ಇಲಾಖೆಯು ಈ ವಿಷಯವನ್ನು ತಿಳಿಸಿದೆ.

 ‘‘ಛತ್ರಪತಿ ಶಿವಾಜಿ ಮಹಾರಾಜ್ ಅವರ ಸ್ಮಾರಕದ ಜಲಪೂಜನ ಕಾರ್ಯಕ್ರಮ, ಮುಂಬೈ ಮೆಟ್ರೋ ಲೈನ್ ಉದ್ಘಾಟನೆ, ಸ್ವೆರೀ-ನವಶೇವಾ ಯೋಜನೆ ಹಾಗೂ ಮುಂಬೈ ನಗರ ಸಾರಿಗೆ ಯೋಜನೆ(ಎಂಯುಟಿಪಿ)ಯಡಿ ನೂತನ ರೈಲು ಮಾರ್ಗ ಯೋಜನೆಗಳ ಶಿಲಾನ್ಯಾಸದ ಜಾಹೀರಾತು ಹಾಗೂ ಪ್ರಚಾರಕ್ಕಾಗಿ ತುರ್ತುನಿಧಿಯಿಂದ 9 ಕೋಟಿ ರೂ.ಒದಗಿಸಲಾಗಿತ್ತು ಎಂದು ಇಲಾಖೆ ತಿಳಿಸಿದೆ.

 ಈ ವೆಚ್ಚವು ತುರ್ತು ಸ್ವರೂಪದ್ದಾಗಿದ್ದರಿಂದ ಈ ಮೊತ್ತವನ್ನು ತುರ್ತುನಿಧಿಯಿಂದ ಪಡೆಯಲಾಗಿದೆಯೆಂದು ಇಲಾಖೆ ಸಮಜಾಯಿಷಿ ನೀಡಿದೆ.

 ಆದರೆ ಸರಕಾರದ ಈ ಕ್ರಮವನ್ನು ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ, ಎನ್‌ಸಿಪಿಯ ಧನಂಜಯ್ ಮುಂಢೆ ಟೀಕಿಸಿದ್ದಾರೆ.

ತುರ್ತು ಉದ್ದೇಶಗಳಿಗಾಗಿಯೇ ತುರ್ತು ನಿಧಿಯನ್ನು ಮೀಸಲಿಡಲಾಗಿದ್ದು, ಅದನ್ನು ಜಾಗರೂಕತೆಯಿಂದ ಬಳಸಬೇಕಾಗಿದೆ. ಆದಾಗ್ಯೂ ರಾಜ್ಯ ಸರಕಾರವು ಯಾವುದೇ ಉದ್ದೇಶಗಳಿಗೂ ತುರ್ತು ನಿಧಿಯನ್ನು ಬಳಸಿಕೊಳ್ಳುವುದು ರಾಜ್ಯ ಸರಕಾರಕ್ಕೆ ಸಾಮಾನ್ಯ ಪದ್ಧತಿಯಾಗಿ ಬಿಟ್ಟಿದೆ ಎಂದಿದ್ದಾರೆ.

ರೈತರಿಗೆ ಆರ್ಥಿಕ ನೆರವು ನೀಡಲು ಈ ಸರಕಾರದ ಬಳಿ ಹಣವಿಲ್ಲ. ಇದೇ ವೇಳೆ ಕೇವಲ ಪ್ರಚಾರದ ಉದ್ದೇಶಗಳಿಗಾಗಿ ಅದು ತುರ್ತು ನಿಧಿಯನ್ನು ಬಳಸಿಕೊಳ್ಳುತ್ತಿದೆಯೆಂದು ಧನಂಜಯ್ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News