ನನ್ನ ಬದುಕಿನ ಸಾಮಾಜಿಕ ಋಣಗಳು

Update: 2017-03-08 03:58 GMT

ಉರ್ವಸ್ಟೋರ್ಸ್‌ನ ಮನೆಯಿಂದ ನಾನು ಶಿಕ್ಷಕಿಯಾಗಿ ಬಜಪೆಗೆ ಹೋಗುತ್ತಿದ್ದುದರಿಂದ ನನಗೆ ಹೆಚ್ಚಿನ ಜನರ ಪರಿಚಯವಾಗಲು ಅವಕಾಶವಿರಲಿಲ್ಲ. ಜತೆಗೆ ಶನಿವಾರ ಸಂಜೆ, ಆದಿತ್ಯವಾರದ ಸಂಜೆಗಳಲ್ಲಿ ಹಿಂದಿ ತರಗತಿಗಳಿಗೆ ಹೋಗುತ್ತಿದ್ದೆ. ಹೀಗೆ ಕಲಿಯುವುದರಲ್ಲಿ ಆಸಕ್ತಿಯಿದ್ದ ನನ್ನ ಬಗ್ಗೆ ನಮ್ಮ ಧಣಿಬಾಯಿ ಕ್ಲೇರಾ ಮಾಯಿಗೆ ಮೆಚ್ಚುಗೆ ಎಂದಿದ್ದೆನಲ್ಲಾ. ಅವರು ಆ ಮೆಚ್ಚುಗೆಯನ್ನು ನನ್ನ ಆರ್ಥಿಕ ನೆರವನ್ನಾಗಿಯೂ ಮಾರ್ಪಡುವಂತೆ ಅವಕಾಶ ಕಲ್ಪಿಸಿಕೊಟ್ಟರು. ಅವರಿಂದಾಗಿ ಸರಕಾರಿ ವಸತಿಗೃಹದ ಕೆಲವು ವಿದ್ಯಾರ್ಥಿನಿಯರಿಗೆ ಮನೆಪಾಠ ಮಾಡುವ ಅವಕಾಶ ದೊರೆಯಿತು. ಹೀಗೆ ನನ್ನ ಶಿಕ್ಷಕ ವೃತ್ತಿ (71ರ) ಜೂನ್‌ನಲ್ಲಿಯೂ ಮುಂದುವರಿಯಿತು. ನನ್ನದು ಖಾಯಂ ಉದ್ಯೋಗವಾಗಿತ್ತು. ಆದರೆ ಕನ್ನಡದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮಾಡಿದ ನನಗೆ ಕನ್ನಡ ಸಾಹಿತ್ಯದ ರುಚಿ ಹತ್ತಿತ್ತು. ಕನ್ನಡದಲ್ಲಿ ಎಂ.ಎ. ಮಾಡಬೇಕೆಂಬ ಆಸೆ ಬಲವಾಗಿತ್ತು. ಒಂದು ವರ್ಷ ದುಡಿದ ಹಣ ಕೂಡಿಡುವುದು ಸಾಧ್ಯವಿರಲಿಲ್ಲ. ಆದ್ದರಿಂದ ಇನ್ನು ಮುಂದೆ ನನ್ನ ಸಂಪಾದನೆಯೂ ಇಲ್ಲದೆ ತಿಂಗಳು ತಿಂಗಳು ಫೀಸು ಕಟ್ಟಿ ಎಂ.ಎ. ಮಾಡುವುದು ಸುಲಭವಾಗಿರಲಿಲ್ಲ.

ಆಗ ಎಂ.ಎ. ತರಗತಿಗಳು ಮಂಗಳೂರಲ್ಲೇ ಇದ್ದುದರಿಂದ ನಡೆದು ಹೋಗಿ ಬರುವುದು ಸಾಧ್ಯವಿತ್ತು. ಬುತ್ತಿ ಒಯ್ಯಬಹುದಾಗಿತ್ತು. ಓದಿಗೆ ಬೇಕಾದ ಸಾಹಿತ್ಯ ಪುಸ್ತಕಗಳು ಅಪ್ಪನ ಸಂಗ್ರಹದಲ್ಲಿ ಇದ್ದುವು. ಹೀಗೆ ಹಲವು ಹೊಂದಾಣಿಕೆಗಳು ಸಾಧ್ಯವಿದ್ದರೂ ಆರ್ಥಿಕ ಅಡಚಣೆ ನೀಗುವ ಉಪಾಯ ಇರಲಿಲ್ಲ. ಇದೀಗ ಅಪ್ಪನಿಗೂ ಮಗಳು ಕಲಿಯುವುದು ಬೇಡ ಎಂಬ ಅಭಿಪ್ರಾಯ ಇರಲಿಲ್ಲ. ಆದರೆ ಆರ್ಥಿಕ ಸಮಸ್ಯೆಯೊಂದಿಗೆ ಮಕ್ಕಳ ಮದುವೆಯ ಜವಾಬ್ದಾರಿಯೂ ಇದೆಯಲ್ಲಾ? ಜತೆಗೆ ಹೆಣ್ಣು ಮಕ್ಕಳು ಹೆಚ್ಚು ಕಲಿತರೆ ಎಲ್ಲಿ ಹೆತ್ತವರ ಮಾತು ಮೀರಿ ನಡೆಯುತ್ತಾರೋ ಎನ್ನುವ ಅಳುಕು ಅಪ್ಪನಾಗಿ ಇದ್ದೇ ಇತ್ತು. ಇದರ ಜತೆಗೆ ಹೆಚ್ಚು ಕಲಿತ ಹುಡುಗಿಯರಿಗೆ ಅವರಿಗಿಂತ ಹೆಚ್ಚು ಕಲಿತ ಅಥವಾ ಅವರಷ್ಟೇ ಕಲಿತ ಹುಡುಗನನ್ನು ಹುಡುಕುವುದು ಕೂಡ ಒಂದು ಸಮಸ್ಯೆಯೇ ಆಗಿತ್ತು. ನಮ್ಮ ಧಣಿಮಾಯಿ ಈಗಾಗಲೇ ಹೇಳಿರುವಂತೆ ಅವರಿವರ ಮನೆಗೆ ಸುಖಕಷ್ಟ ಮಾತನಾಡುವ ಸ್ವಭಾವದವರೆಂದ ಮೇಲೆ ಬಿಡಾರದಲ್ಲಿರುವ ನಮ್ಮ ಮನೆಗೆ ಬಾರದಿರುತ್ತಾರೆಯೇ? ದಿನಕ್ಕೊಮ್ಮೆಯಾದರೂ ಹಿತ್ತಲಿಗೆ ಬಂದು ಮಾತನಾಡಿದರೆ ವಾರಕ್ಕೆರಡು ಬಾರಿಯಾದರೂ ಮನೆಯೊಳಗೆ ಬಂದು ಮಾತಾಡಿ ಹೋಗುತ್ತಿದ್ದು, ನಮ್ಮ ಮನೆಯ ಕಷ್ಟಸುಖಗಳನ್ನು ತಿಳಿದುಕೊಳ್ಳುತ್ತಿದ್ದರು. ಅವರ ಮಾತುಗಳಲ್ಲಿ ಅವರಿವರ ಮನೆಯ ವಿಷಯಗಳಿದ್ದರೂ ಅನೇಕ ಹೊಸ ತಿಳುವಳಿಕೆಗಳಿರುತ್ತಿತ್ತು. ಅನುಭವದ ಮಾತುಗಳೂ ಇರುತ್ತಿತ್ತು. ಈ ಹೊತ್ತಿನಲ್ಲೇ ನಾನು ಮುಂದೆ ಓದಬೇಕೆನ್ನುವ ಆಸೆ ಹಾಗೂ ಅದು ಸಮಸ್ಯೆಯಾಗಿರುವುದೂ ಅವರಿಗೆ ತಿಳಿಯಿತು.

ನಾವು ಬಿಡಾರ ಬಂದು ಆರು ತಿಂಗಳಲ್ಲೇ ನಾನು ಖಾಯಂ ಕೆಲಸ ಬಿಟ್ಟು ಪುನಃ ಕಲಿಯುವುದೆಂದರೆ ಉಳಿದ ಯಾರಾದರೂ ನನಗೆ ಅಹಂಕಾರ ಎನ್ನುತ್ತಿದ್ದರೋ ಏನೋ? ಆದರೆ ವಿದ್ಯಾಪಕ್ಷಪಾತಿಯಾಗಿದ್ದ, ಜತೆಗೆ ಹೆಣ್ಣಿನ ಸ್ವಾವಲಂಬಿತನದ ಅರಿವು ಇದ್ದ ಸ್ವತಃ ಸ್ವಾವಲಂಬಿಯಾಗಿದ್ದ ಆ ಹಿರಿಜೀವ ‘‘ಹೋಗಲಿ, ಮಾಷ್ಟ್ರೇ, ಅವಳು ಚುರುಕಾಗಿದ್ದಾಳೆ, ಚೆನ್ನಾಗಿ ಓದುತ್ತಾಳೆ. ಅವಳು ಕಲಿಯುವ ಎರಡು ವರ್ಷಗಳ ಅವಧಿಯ ಬಾಡಿಗೆ ಕೊಡಬೇಡಿ. ಅವಳಿಗೆ ಕೆಲಸ ಸಿಕ್ಕಿದ ಮೇಲೆ ಕೊಡುವಿರಂತೆ’’ ಎಂದಾಗ ನನಗೆ ಇದ್ಯಾವ ಜನ್ಮದ ನಂಟು ಎನ್ನಿಸಿದ್ದು ನಿಜ. ಅವರು ಆಡಿದ ಮಾತಿನಂತೆ ನಡೆದುಕೊಂಡರು. ಸೆಪ್ಟಂಬರ್ ತಿಂಗಳಲ್ಲಿ ನಾನು ಎಂ.ಎ. ತರಗತಿಗೆ ಸೇರಿಕೊಂಡೆ. ಬಜಪೆಗೂ ನನಗೂ ಋಣ ಮುಗಿಯಿತು ಆದರೆ ಶಾಲೆಯ ಹಾಗೂ ಅಲ್ಲಿನ ವಿದ್ಯಾರ್ಥಿಗಳ ಪ್ರೀತಿಯ ಋಣ ತೀರುವುದು ಹೇಗೆ? ‘‘ಕೊಡುವುದೇನು ಕೊಂಬುದೇನು ಒಲವು ಸ್ನೇಹ ಪ್ರೀತಿ’’.

ಇದೀಗ ನಾನು ಎಂ.ಎ. ತರಗತಿಯ ವಿದ್ಯಾರ್ಥಿನಿಯಾಗಿ ಉರ್ವಸ್ಟೋರ್ಸ್‌ ಬಸ್ ನಿಲ್ದಾಣಕ್ಕೆ ಬಂದು ನಿಂತರೆ ನನ್ನನ್ನು ಆಶ್ಚರ್ಯದಿಂದ, ಕುತೂಹಲದಿಂದ ನೋಡುವವರು ಬಹಳಷ್ಟು ಮಂದಿ. ನಿಧಾನವಾಗಿ ಅವರೆಲ್ಲರೂ ಪರಿಚಿತರಾದರು. ನನ್ನ ಬೋಳುಕುತ್ತಿಗೆ, ಬೋಳು ಕೈಗಳು, ಕೈಯಲ್ಲಿ ದೊಡ್ಡಗಾತ್ರದ ಹಲವು ಪುಸ್ತಕಗಳು(ಈಗಿನಂತೆ ಆಗ ಬ್ಯಾಕ್ ಬ್ಯಾಗುಗಳಿರಲಿಲ್ಲ). ನಾನು ಡಾಕ್ಟರಿಕೆ ಓದುವವಳು ಎಂದು ಅನ್ನಿಸುವಂತೆ ಮಾಡಿತ್ತು. ಪರಿಚಯವಾದ ಬಳಿಕ ನಾನು ಕನ್ನಡ ಎಂ.ಎ. ಮಾಡುವವಳೆಂದು ತಿಳಿದು ಇನ್ನಷ್ಟು ಹೆಮ್ಮೆ ಪಟ್ಟರು. ಯಾಕೆಂದರೆ ಆ ದಿನಗಳಲ್ಲಿ ಕನ್ನಡ ವ್ಯಾಕರಣ, ಹಳೆಗನ್ನಡ ಇವೆಲ್ಲ ಕಷ್ಟವೆಂದೇ ಬಹಳಷ್ಟು ಜನ ತಿಳಿದಿದ್ದರು. ಈಗಲೂ ಅದೇ ಅಭಿಪ್ರಾಯವಿದ್ದರೂ ಕನ್ನಡಕ್ಕೆ ಬೆಲೆ ಇಲ್ಲವಾದ್ದರಿಂದ ಎಂ.ಎ. ಮಾಡುವುದು ವ್ಯರ್ಥ ಎಂಬ ಭಾವನೆ ಸಾಮಾನ್ಯವಾಗಿದೆ. ಅಂದಿನ ದಿನಗಳಲ್ಲಿ ಉರ್ವಸ್ಟೋರ್ಸ್‌ ಎಂಬ ಊರಿನಲ್ಲಿ ಎಂ.ಎ. ಮಾಡುತ್ತಿದ್ದವಳು ನಾನೊಬ್ಬಳೇ ಎನ್ನುವುದು ನನ್ನ ಸಂತೋಷ.

ಆದರೆ ನನಗೆ ಗೊತ್ತಿದ್ದಂತೆ ಉರ್ವಸ್ಟೋರ್ಸ್‌ನಿಂದಲೇ ಮತ್ತೊಬ್ಬಾಕೆ ಕೆ.ಆರ್.ಇ.ಸಿ.ಯಲ್ಲಿ ನಡೆಯುತ್ತಿದ್ದ ಗಣಿತ ಎಂ.ಎಸ್ಸಿ ತರಗತಿಗಳಿಗೆ ಹೋಗುತ್ತಿದ್ದವಳು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಲೋಬೋ ಅವರ ಮಗಳು. ಹೀಗೆ ಅಂದು ನನ್ನ ಓದಿನ ಕಾರಣದಿಂದಲೇ ವಿಶೇಷ ಗೌರವ ಪಡೆದಿದ್ದೆ. ನನ್ನ ಜತೆಗೆ ಮಾತನಾಡುತ್ತಿದ್ದ ಪರಿಚಿತ ಮಹಿಳಾ ಉದ್ಯೋಗಿಗಳೆಲ್ಲಾ ಸಾಮಾನ್ಯವಾಗಿ ಎಸೆಸೆಲ್ಸಿ ಓದು ಮುಗಿಸಿ ಟೈಪ್‌ರೈಟಿಂಗ್ ಕಲಿತವರಾಗಿದ್ದರು. ಉಳಿದಂತೆ ಪುರುಷರ ಓದೂ ಅಷ್ಟೇ ಇದ್ದರೂ ವಿರಳ ಸಂಖ್ಯೆಯಲ್ಲಿ ಉಪನ್ಯಾಸಕರಾಗಿದ್ದವರು, ಅಧಿಕಾರಿಗಳಾಗಿದ್ದವರು, ಇಂಜಿನಿಯರ್‌ಗಳಾಗಿದ್ದವರು, ಪದವೀಧರರು, ಸ್ನಾತಕೋತ್ತರ ಪದವೀಧರರಿದ್ದರು. ನಾವೆಲ್ಲ ಪರಸ್ಪರ ಗೌರವದಿಂದ ನಮಸ್ಕರಿಸುವ ಮೂಲಕ ಒಂದು ವಿದ್ಯಾವಂತ ಸಮಾಜದ ನಾಗರಿಕರಂತೆ ವ್ಯವಹರಿಸುತ್ತಿದ್ದೆವು. ನನಗೆ ವೈಯಕ್ತಿಕವಾಗಿ ಸರಕಾರದ ಹಲವು ಕಚೇರಿಗಳ, ಇಲಾಖೆಗಳ ಪರೋಕ್ಷ ಪರಿಚಯವಾಯಿತು.

ನಮ್ಮ ಉರ್ವಸ್ಟೋರಲ್ಲಿ ಅಶೋಕನಗರ ಅಂಚೆಕಚೇರಿ ಇತ್ತು. ಆಗ ಇಂದಿನಂತೆ ಫೋನು, ಮೊಬೈಲುಗಳ ಕಾಲ ಅಲ್ಲದಿದ್ದರೂ ಹೆಣ್ಣು ಮಕ್ಕಳು ಪತ್ರ ಬರೆಯುವ ಅಥವಾ ಪತ್ರ ಪಡೆಯುವ ಸಂದರ್ಭಗಳೂ ಇರಲಿಲ್ಲ. ಆದರೆ ನಾನು ಎಂ.ಎ. ತರಗತಿಗೆ ಅರ್ಜಿ ಹಾಕಿದ್ದು, ಅದರ ಆಯ್ಕೆಯ ಆದೇಶ ಅಂಚೆಕಾರ್ಡಿನಲ್ಲಿ ಬಂದುದರಿಂದ ಪೋಸ್ಟ್‌ಮಾಸ್ಟರಿಗೆ ಮತ್ತು ಅಲ್ಲಿನ ಮೂವರು ಸಿಬ್ಬಂದಿಗೂ ನಾನು ಎಂ.ಎ. ಮಾಡುತ್ತಿರುವವಳಾಗಿ ಗೌರವ ಪಾತ್ರಳಾಗಿದ್ದೆ. ಅಲ್ಲದೆ ಪತ್ರಿಕೆಗಳಿಗೆ ಲೇಖನ, ಕವನಗಳನ್ನು ಕಳುಹಿಸುವ ಮತ್ತು ಅವರಿಂದ ನನಗೆ ಪತ್ರಗಳು ಬರುವ ವ್ಯವಹಾರದಿಂದ ನಾನು ಅಂಚೆಕಚೇರಿಯ ಗ್ರಾಹಕಳಾಗಿಯೂ ಪರಿಚಿತಳಾಗಿ ಗೌರವ ಪಡೆದೆ. ಆಗ ಉರ್ವಸ್ಟೋರಿನ ಅಂಚೆಕಚೇರಿಯಲ್ಲಿ ನಾಗೇಶ್ ಶೆಣೈ ಅಥವಾ ನಾಗೇಶ್ ಕಾಮತ್ ಎಂಬವರು ಪೋಸ್ಟ್ ಮಾಸ್ತರರಾಗಿದ್ದರು. ಗೋಪಾಲ ಎನ್ನುವವರು ನಮ್ಮ ಮನೆಗೆ ಅಂಚೆ ತರುತ್ತಿದ್ದರು. ಜತೆಗೆ ಅಪ್ಪನೂ ಅಂಚೆಕಚೇರಿಯ ಗ್ರಾಹಕರೇ ಆಗಿದ್ದು ಅಂಚೆಕಚೇರಿಯೊಂದಿಗೆ ಸಂಪರ್ಕವಿದ್ದುದೇ ಆಗಿದ್ದು, ಈಗ ಅಪ್ಪನಿಗೆ ತಕ್ಕ ಮಗಳು ಎಂಬ ಗೌರವ ನನಗೆ ದೊರೆತರೆ ಅಪ್ಪನಿಗೂ ಸ್ನಾತಕೋತ್ತರ ಪದವಿ ಓದುತ್ತಿರುವ ಮಗಳಿಂದ ವಿಶೇಷ ಗೌರವ ಇತ್ತು. ಉರ್ವಸ್ಟೋರ್ಸ್‌ನ ಆಸುಪಾಸಲ್ಲಿ ಅಪ್ಪನಿಗೆ ಅವರ ಚರ್ಚ್‌ಶಾಲೆಯ 20 ವರ್ಷಗಳ ಹಿಂದಿನ ವಿದ್ಯಾರ್ಥಿಗಳೆಲ್ಲಾ ಈಗ ಸಿಗುತ್ತಿದ್ದರು. ಅವರೆಲ್ಲ ಉದ್ಯೋಗಿಗಳಾಗಿ, ಸ್ವಯಂ ಉದ್ಯೋಗಿಗಳಾಗಿದ್ದವರಲ್ಲದೆ, ಸರಕಾರಿ ನೌಕರಿಯಲ್ಲಿ, ಬ್ಯಾಂಕ್ ಉದ್ಯೋಗಿಗಳಾಗಿಯೂ ಇದ್ದರು. ಹುಡುಗಿಯರನೇಕರು ಗೃಹಿಣಿಯರಾಗಿಯೂ ಲೇಡಿಹಿಲ್‌ನಿಂದ ಚಿಲಿಂಬಿ, ಉರ್ವಸ್ಟೋರ್ಸ್‌, ಕೊಟ್ಟಾರಗಳಲ್ಲಿ ವಾಸವಾಗಿದ್ದವರು ಸಿಗುತ್ತಿದ್ದು, ಈ ಊರು ಅಪರಿಚಿತವೆನಿಸದೆ ಆತ್ಮೀಯವೇ ಆಗಿತ್ತು. ಈ ದೃಷ್ಟಿಯಲ್ಲಿ ಶಿಕ್ಷಕ ವೃತ್ತಿಯಷ್ಟು ಜನಪ್ರಿಯತೆ ಹಾಗೂ ಗೌರವದ ವೃತ್ತಿ ಬೇರೆ ಇಲ್ಲ ಎಂದು ನನಗೂ ಅನ್ನಿಸಿತ್ತು.

ಡಾ. ಎಂ.ಡಿ. ಕಾಮತರು ಉರ್ವಸ್ಟೋರ್ಸ್‌ನ ಜನಪ್ರಿಯ ಡಾಕ್ಟರರು. ಡಾಕ್ಟರ್ ಎಚ್.ಡಿ. ಅಡ್ಯಂತಾಯರ ಬಳಿಕ ನಮಗೆ ಕುಟುಂಬ ವೈದ್ಯರಾಗಿ ಆತ್ಮೀಯರಾದವರು. ಅವರು ಔಷಧಿ ಕೊಡುವುದರೊಂದಿಗೆ ರೋಗಿಗಳ ಮನೆವಾರ್ತೆಯನ್ನೆಲ್ಲಾ ತಿಳಿದುಕೊಂಡು ಅವರ ಸಂಪಾದನೆಗೆ ತಕ್ಕ ಹಾಗೆ ಫೀಸು ತೆಗೆದುಕೊಳ್ಳುತ್ತಿದ್ದುದು ವಿಶೇಷವಾಗಿತ್ತು. ಅಂದರೆ ಬಡವರಿಂದ ಕಡಿಮೆ ಹಣ ಪಡೆದುಕೊಳ್ಳುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ನನ್ನ ಮನೆಯೂ ಅವರ ದೃಷ್ಟಿಯಲ್ಲಿ ಕಾಲೇಜು, ಹೈಸ್ಕೂಲು ಓದುತ್ತಿರುವ ಮಕ್ಕಳಿರುವ ಮನೆಯಲ್ಲವೇ? ಜತೆಗೆ ನನ್ನ ಮನೆಯಲ್ಲಿ ಎಲ್ಲರಿಗಿಂತಲೂ ಡಾಕ್ಟರರನ್ನು ಭೇಟಿಮಾಡುತ್ತಿದ್ದವಳು ನಾನೇ. ವಾರಕ್ಕೊಮ್ಮೆ ಎಂಬಂತೆ ಶೀತ, ನೆಗಡಿ, ತಲೆಭಾರದ ಸಾಮಾನ್ಯ ಕಾಯಿಲೆಯಾದರೂ ಅದು ಮನೆ ಮದ್ದಿಗೆ ಹೆದರುತ್ತಿರಲಿಲ್ಲ. ಆದ್ದರಿಂದ ಎಂ.ಡಿ. ಕಾಮತರ ಬಳಿಗೆ ಹೋಗುವುದು ಸಾಮಾನ್ಯವಾಗಿತ್ತು. ಅಂತಹ ದಿನಗಳಲ್ಲಿ ಡಾಕ್ಟರರ ದುಡ್ಡು ಬಾಕಿ ಇಡುತ್ತಿದ್ದುದೇ ಹೆಚ್ಚು. ಆಗೆಲ್ಲಾ ‘‘ಮಾಸ್ಟ್ರೇ, ಇವಳ ಚಿಕಿತ್ಸೆಯ ಹಣ ಈಗ ಬೇಡ, ಇವಳು ಲೆಕ್ಚರರ್ ಆದ ಮೇಲೆ ಕೊಡುವಿರಂತೆ’’ ಎಂದು ಬಾಕಿ ಇದ್ದಾಗ ಸಮಾಧಾನಪಡಿಸುತ್ತಿದ್ದರು ಮತ್ತು ಹಾಗೆಯೇ ಅಪ್ಪ ಕೊಡುತ್ತಿದ್ದ ಸಂದರ್ಭಗಳಲ್ಲೂ ‘‘ಈಗ ಬೇಡ’’ ಎಂದು ನಿರಾಕರಿಸುತ್ತಿದ್ದರು. ಹೀಗೆ ನನ್ನ ಬದುಕಿಗೆ ಸಾಮಾಜಿಕ ಋಣ ಹೆಚ್ಚಾಗುತ್ತಿತ್ತು ಎಂದರೆ ತಪ್ಪಲ್ಲ. ಡಾಕ್ಟರರಿಗೆ ನನ್ನ ಮೇಲೆ ವಿಶೇಷ ಪ್ರೀತಿ ಇತ್ತು. ಅವರಿಗೆ ಮೂವರು ಗಂಡು ಮಕ್ಕಳಿದ್ದು ಹೆಣ್ಣು ಮಕ್ಕಳಿರಲಿಲ್ಲ. ಉರ್ವಸ್ಟೋರ್ಸ್‌ನ ನಮ್ಮ ಮನೆಯೇ ಮುಖ್ಯರಸ್ತೆಗಿಂತ ತಗ್ಗಿನಲ್ಲಿದ್ದರೆ, ಅದಕ್ಕಿಂತಲೂ ತಗ್ಗಿನಲ್ಲಿ ಗದ್ದೆಗಳು ಇದ್ದು, ಅದು ದಡ್ಡಲ್‌ಕಾಡಿನ ರಸ್ತೆಗಿಂತಲೂ ತಗ್ಗಿನಲ್ಲಿತ್ತು. ಆಗ ಅಲ್ಲಿ ಭತ್ತ ಬೆಳೆಯುತ್ತಿದ್ದರು. ಆ ಗದ್ದೆಗಳು ನಮ್ಮ ಧಣಿಮಾಯಿಯವರ ಸೋದರ ಸೊಸೆ ಸಿಲೆಸ್ತಿನ್ ಮಾಯಿಯವರಿಗೆ ಸೇರಿತ್ತು. ಸಿಲೆಸ್ತಿನ್ ಮಾಯಿ ಕೂಡ ವಯಸ್ಸಿನಲ್ಲಿ ಹಿರಿಯರೇ, ಅವರು ಕೂಡ ಮಾಯಿಯಂತೆ ಕಷ್ಟ ಜೀವಿ. ಅವರ ಮನೆಯಲ್ಲಿ ವಯಸ್ಸಾದ ಹಾಗೂ ಹೆಚ್ಚು ಓಡಾಡಲಾಗದ ಅವರ ಗಂಡನನ್ನು ನೋಡಿಕೊಳ್ಳುವುದರೊಂದಿಗೆ ಕೃಷಿಯ ಕೆಲಸ, ತೆಂಗಿನ ತೋಟ, ಮಲ್ಲಿಗೆ ತೋಟ, ದನ ಸಾಕಣೆ ಎಲ್ಲವನ್ನೂ ನಿಭಾಯಿಸುತ್ತಿದ್ದರು. ಇವರ ಇಬ್ಬರು ಗಂಡು ಮಕ್ಕಳು ಪರ ಊರಿನಲ್ಲಿದ್ದರು. ಇವೆಲ್ಲದರ ಜತೆಗೆ ಬ್ಯಾಂಕು, ಕಚೇರಿ, ಲೈಟ್‌ಬಿಲ್ಲು, ಟ್ಯಾಕ್ಸ್‌ಗಳೆಂದು ಓಡಾಡುತ್ತಿದ್ದವರೂ ಅವರೇ. ಕಾಪಿಕಾಡಿನಲ್ಲಿದ್ದ ಮಹಿಳೆಯರು ಮನೆ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರೂ ಹೊರಗಿನ ವ್ಯವಹಾರಗಳಿಗೆ ಓಡಾಡಿದವರನ್ನು ನೋಡಿರಲಿಲ್ಲ. ದೇರೆಬೈಲಲ್ಲಿ ಉದ್ಯೋಗಿ ಮಹಿಳೆಯರನ್ನು ನೋಡಿದರೂ ಇಂತಹ ವ್ಯವಹಾರಗಳನ್ನು ಅವರ ಗಂಡಂದಿರೇ ನಿರ್ವಹಿಸುತ್ತಿದ್ದರು. ಈ ದೃಷ್ಟಿಯಿಂದ ಕ್ಲೇರಾಮಾಯಿ ಮತ್ತು ಸಿಲೆಸ್ತಿನ್ ಮಾಯಿ ಇವರ ಜೀವನಶೈಲಿ ನನಗೆ ಒಂದು ರೀತಿಯ ಖುಷಿ ಕೊಡುತಿತ್ತು. ಜತೆಗೆ ಅವರಿಗಿದ್ದ ಸ್ವಾತಂತ್ರವೂ ಪ್ರಿಯವಾಗಿತ್ತು.

ಈ ಅತ್ತೆ ಸೊಸೆಯರ ದಿನನಿತ್ಯದ ಎಲ್ಲಾ ಕೆಲಸಗಳಲ್ಲೂ ಶಿಸ್ತು, ಸಮಯಪ್ರಜ್ಞೆ ಎದ್ದು ಕಾಣುತ್ತಿತ್ತು. ಇನ್ನುಳಿದ ಕೆಲವು ಮನೆಗಳು ಕೂಡ ಕ್ರಿಶ್ಚಿಯನರದ್ದೇ ಆಗಿದ್ದು ಎಲ್ಲರೂ ಸ್ವಂತ ಮನೆಗಳವರೇ. ಜತೆಗೆ ಎಲ್ಲರಿಗೂ ಒಂದಿಷ್ಟು ತೆಂಗಿನ ಮರಗಳು, ಮಾವು, ಹಲಸು, ಪೇರಳೆ, ದೀವಿ ಹಲಸಿನ ಮರಗಳು ಜತೆಗೆ ಮಲ್ಲಿಗೆ ತೋಟವೂ ಇದ್ದು ಇಲ್ಲಿ ಎಲ್ಲರೂ ಮಹಿಳೆಯರೇ ಈ ತೋಟಗಾರಿಕೆಯನ್ನು ಮಾಡುತ್ತಿದ್ದವರು. ಗಂಡಂದಿರು ಮುಂಬೈಯಂತಹ ಊರಿನಲ್ಲಿ ದುಡಿಯುತ್ತಿದ್ದರು. ಇವರೆಲ್ಲರೂ ಕಟ್ಟಿಕೊಡುತ್ತಿದ್ದ ಮಲ್ಲಿಗೆ ಹೂವು, ಇತರ ಹೂಮಾಲೆಗಳನ್ನು ಅಲ್ಲಿಯೇ ವಾಸವಿದ್ದ ಬಾಯಮ್ಮ ಪೇಟೆಗೆ ಕೊಂಡೊಯ್ಯುತ್ತಿದ್ದರು. ಆಕೆ ಅಪ್ಪನ ಶಿಷ್ಯೆಯೂ ಆಗಿದ್ದು, ನಮಗೆ ಮನೆಗೆ ಹೂವು ಬೇಕಾದಾಗ ಅವರಿಂದಲೇ ಕೊಂಡುಕೊಳ್ಳುತ್ತಿದ್ದೆವು. ಬೆಳಗ್ಗೆ ಬೇಗ ಎದ್ದು ಅಂದಿನ ಮಲ್ಲಿಗೆ ಮೊಗ್ಗುಗಳನ್ನು ಎಚ್ಚರದಿಂದ ಹುಡುಕಿ ಕೊಯ್ದರೆ ಸಂಜೆಯ ವೇಳೆಗೆ ಉಳಿದ ಕೆಲವು ಹೂ ಮೊಗ್ಗುಗಳು ದೊಡ್ಡದಾಗಿ ಎದ್ದು ಕಾಣುತ್ತಿದ್ದವು. ಅಂತಹವುಗಳನ್ನು ಕಟ್ಟಿ ಇಟ್ಟರೆ ದೇರೆಬೈಲಿನಿಂದ ಬರುತ್ತಿದ್ದ ಬಾಯಮ್ಮನವರು ಒಯ್ದು ಉರ್ವಸ್ಟೋರ್ಸ್‌ನ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು.

ತುಂಬಾ ಹೂಗಳು ಇಲ್ಲದಿದ್ದರೆ ಧಣಿಮಾಯಿ ಕಟ್ಟಿ ನಮಗೆ ಮುಡಿಯಲು ತಂದು ಕೊಡುತ್ತಿದ್ದರು. ನಮಗೂ ಪ್ರತೀ ರವಿವಾರ ಅಪ್ಪನಿಗೆ ಪುರಾಣವಾಚನ ಕಾರ್ಯಕ್ರಮದಲ್ಲಿ ದೊರೆಯುತ್ತಿದ್ದ ಹೂಹಾರಗಳು ಮುಡಿಯಲು ದೊರೆಯುತ್ತಿತ್ತು. ಕ್ರಿಶ್ಚಿಯನ್ನರು ಮದುವೆ ಸಂದರ್ಭಗಳಲ್ಲಿ ಅಲ್ಲದೆ ಹೂ ಮುಡಿಯುತ್ತಿರಲಿಲ್ಲ. ಆದ್ದರಿಂದ ನಮಗೆ ದೊರೆಯುತ್ತಿದ್ದ ಹೂಗಳು ಹೆಚ್ಚಿದ್ದಾಗ ಪಕ್ಕದ ಹಿಂದೂ ಮನೆಗಳವರಿಗೆ ಕೊಡುತ್ತಿದ್ದೆವು. ಅಪ್ಪ ಇಲ್ಲಿಂದಲೂ ಯೆಯ್ಯೆಡಿಯ ಭಜನಾ ಮಂದಿರದ ಪುರಾಣ ವಾಚನ ಕಾರ್ಯಕ್ರಮಕ್ಕೆ ತಪ್ಪದೆ ಹೋಗುತ್ತಿದ್ದರು. ಉರ್ವಮಾರ್ಕೆಟ್, ಕೋಡಿಕಲ್‌ನಿಂದ ಬರುತ್ತಿದ್ದ ಭಕ್ತಾದಿಗಳು ಈಗ ನಮ್ಮಾಂದಿಗೆ ಹರಿಪದವು ದಾರಿಯಲ್ಲಿ ಜತೆಯಾಗಿ ಹೋಗಿ ಬರುತ್ತಿದ್ದೆವು. 1946ನೆ ಇಸವಿಯಿಂದ ಶುರುವಾದ ಈ ಕಾರ್ಯಕ್ರಮ ಸುಮಾರು 1984ರ ವರೆಗೆ ನಡೆದುದು, ಈ ಕಾರಣದಿಂದಲೇ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಸ್ನೇಹ ಸಂಬಂಧ ನಾಲ್ಕು ದಶಕಗಳಿಗೂ ಮೀರಿ ನಡೆದುದು ಒಂದು ಚಾರಿತ್ರಿಕ ದಾಖಲೆಯೆಂದರೆ ತಪ್ಪಲ್ಲ.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News