ಮಹಿಳಾ ಕ್ರೀಡಾಪಟುಗಳ ಅಹವಾಲು ಸ್ವೀಕರಿಸಲು ಉನ್ನತ ಸಮಿತಿ
ಹೊಸದಿಲ್ಲಿ, ಮಾ.8: ದೇಶದಲ್ಲಿ ಮಹಿಳಾ ಕ್ರೀಡಾಪಟುಗಳ ದೂರು ಹಾಗೂ ಅಹವಾಲುಗಳನ್ನು ಬಗೆಹರಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ಕೇಂದ್ರ ಸರಕಾರ ಬುಧವಾರ ನಿರ್ಧರಿಸಿದೆ. ಜಂಟಿ ಕ್ರೀಡಾಕಾಯದರ್ಶಿ ಅವರ ಅಧ್ಯಕ್ಷತೆಯ ಈ ಸಮಿತಿಯು ಅಥ್ಲೀಟ್‌ಗಳು, ನ್ಯಾಯವಾದಿ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಹಿರಿಯ ಅಧಿಕಾರಿ ಹಾಗೂ ಕ್ರೀಡಾ ಪತ್ರಕರ್ತರನ್ನು ಒಳಗೊಳ್ಳಲಿದ್ದು, ಎಲ್ಲರೂ ಮಹಿಳೆಯರು ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬುಧವಾರ ಕ್ರೀಡಾ ಸಚಿವಾಲಯವು ಹೊಸ ದಿಲ್ಲಿಯಲ್ಲಿ ಆಯೋಜಿಸಿದ್ದ ‘ಭಾರತದಲ್ಲಿ ಮಹಿಳೆ ಯರು ಹಾಗೂ ಕ್ರೀಡೆ’ ಎಂಬ ಸಮಾವೇಶ ವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಕ್ರೀಡಾ ಚಟುವಟಿಕೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಮಹಿಳಾ ಅಥ್ಲೀಟ್‌ಗಳು ಯಾವುದೇ ಬಗೆಯ ದೂರುಗಳಿಗೂ ಈ ಸಮಿತಿಯನ್ನು ಸಂಪರ್ಕಿಸಿ, ತಮ್ಮ ಅಹವಾಲುಗಳಿಗೆ ಪರಿಹಾರವನ್ನು ಕಂಡು ಕೊಳ್ಳಬಹುದು ಎಂದು ತಿಳಿಸಿದ ಸಚಿವರು, ಲೈಂಗಿಕ ಕಿರುಕುಳದ ವಿಷಯದಲಿ ಸಚಿವಾಲಯವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತಿದೆಯೆಂದು ಹೇಳಿದ್ದಾರೆ.
ಪುರುಷ ಹಾಗೂ ಮಹಿಳಾ ಅಥ್ಲೀಟ್‌ಗಳಿಗೆ ಸಚಿವಾಲಯವು ಸಮಾನವಾದ ನೆರವು ಹಾಗೂ ಉತ್ತೇಜನಗಳನ್ನು ನೀಡಲಿದ್ದು, ಕ್ರೀಡಾ ತರಬೇತಿಯಲ್ಲಿ ಯಾವುದೇ ಲಿಂಗ ತಾರತಮ್ಯ ವಿರುವುದಿಲ್ಲವೆಂದರು. ಭಾರತೀಯ ಕ್ರೀಡಾ ಪ್ರಾಧಿಕಾರವು ತನ್ನ ವಿಶೇಷ ಕ್ಷೇತ್ರ ಕ್ರೀಡೆ ಯೋಜನೆಯಡಿ ಒಟ್ಟು 1862 ಮಂದಿಗೆ ತರಬೇತಿ ನೀಡಿದ್ದು, ಅವರಲ್ಲಿ 807 ಮಂದಿ ಮಹಿಳೆಯರೆಂದು ಸಚಿವರು ಹೇಳಿದರು.
ಅಥ್ಲೀಟ್ ಬಾಲಕಿಯರ ಸುರಕ್ಷತೆ, ಮಹಿಳಾ ಕೋರ್ಚ್ ಗಳು, ಕ್ರೀಡಾಸಂಕೀರ್ಣದಲ್ಲಿ ನಡೆಯುವ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಶೂನ್ಯ ಸಹಿಷ್ಣುತೆ, ಕ್ರೀಡಾಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯ,ಲಿಂಗ ಸಮಾನತೆ ಇತ್ಯಾದಿ ವಿಷಯಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಯಿತು.