ಗಂಗೆಯಲ್ಲಿ ಅಸ್ತಿ ವಿಸರ್ಜಿಸಿದ ಸ್ಟೀವ್ ವಾ !

Update: 2017-03-09 05:21 GMT

ವಾರಣಾಸಿ : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟೀವ್ ವಾ ಅವರು ಮಂಗಳವಾರ ವಾರಣಾಸಿಯ ಗಂಗಾ ಘಾಟ್ ಗೆ ಭೇಟಿ ನೀಡಿ ತಮ್ಮ ಆತ್ಮೀಯ ಗೆಳೆಯನೊಬ್ಬನ ಅಸ್ತಿಯನ್ನು ಪವಿತ್ರ ಗಂಗಾ ನದಿಯಲ್ಲಿ ವಿಸರ್ಜಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ತೀರಿಕೊಂಡಿದ್ದ ಅವರ ಸ್ನೇಹಿತ ಸ್ಟೀಫನ್ ಅವರು ತಮ್ಮ ಅಸ್ತಿಯನ್ನು ಗಂಗೆಯಲ್ಲೇ ವಿಸರ್ಜಿಸಬೇಕೆಂದು ಬಯಸಿದವರು.

ಅಂತೆಯೇ ತಮ್ಮ ಸ್ನೇಹಿತನ ಕೊನೆಯ ಆಸೆಯನ್ನು ಪೂರೈಸುವ ಸಲುವಾಗಿ ಮಣಿಕರ್ನಿಕಾ ಘಾಟ್ ಗೆ ಮಂಗಳವಾರ ಆಗಮಿಸಿದರು. ಅವರೊಂದಿಗೆ ಅವರ ಇನ್ನೊಬ್ಬ ಸ್ನೇಹಿತ ಜಾನ್ಸನ್ ಕೂಡ ಆಗಮಿಸಿದ್ದರು.

ಮಂಗಳವಾರ ಅಪರಾಹ್ನ ಆಗಮಿಸಿದ ಸ್ಟೀವ್ ಅವರು ಗೈಡ್ ಒಬ್ಬರ ಸಹಾಯ ಪಡೆದು ಬೋಟ್ ಮುಖಾಂತರ ಮಣಿಕರ್ನಿಕಾ ಘಾಟ್ ತಲುಪಿ ಅಲ್ಲಿ ಅಸ್ತಿ ವಿಸರ್ಜಿಸಿ ಆ ಪ್ರಕ್ರಿಯೆಯ ಫೋಟೋಗಳನ್ನೂ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದರು. ಸ್ವಲ್ಪ ಸಮಯ ಅಲ್ಲಿದ್ದು ನಂತರ ಸ್ಟೀವ್ ಮರಳಿದ್ದರು.

ವಾರಣಾಸಿ ಭೇಟಿಯ ಸಂದರ್ಭ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಸ್ಟೀವ್, ತಮ್ಮ ಗೆಳೆಯ ಸ್ಟೀಫನ್ ಇಸ್ಕಾನ್ ಅನುಯಾಯಿಯಾಗಿದ್ದರೆಂದು ಹೇಳಿದರು.

ಮಾತುಕತೆ ಕ್ರಿಕೆಟಿನತ್ತ ಹೊರಳಿ ಯಾವ ತಂಡ ಅವರ ಅಭಿಪ್ರಾಯದಲ್ಲಿ ಉತ್ತಮ ಎಂದು ಕೇಳಿದಾಗ ಯಾವ ತಂಡ ಗೆಲ್ಲುವುದೋ ಅದೇ ಉತ್ತಮ ಎಂದು ಬಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News