×
Ad

ಲಕ್ನೋ ಎನ್‌ಕೌಂಟರ್:ಹತ ಸೈಫುಲ್ಲಾನ ತಂದೆಯ ಬಗ್ಗೆ ಸರಕಾರಕ್ಕೆ ಹೆಮ್ಮೆಯಿದೆ-ರಾಜನಾಥ ಸಿಂಗ್

Update: 2017-03-09 14:33 IST

ಹೊಸದಿಲ್ಲಿ,ಮಾ.9: ಬುಧವಾರ ಬೆಳಗಿನ ಜಾವ ಲಕ್ನೋದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಶಂಕಿತ ಭಯೋತ್ಪಾದಕ ಮುಹಮ್ಮದ್ ಸೈಫುಲ್ಲಾ ತನ್ನ ಮಗನೇ ಅಲ್ಲ ಎನ್ನುವ ಮೂಲಕ ಆತನ ತಂದೆ ಸರ್ತಾಜ್ ಮುಹಮ್ಮದ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ ಎಂದು ಗೃಹಸಚಿವ ರಾಜನಾಥ ಸಿಂಗ್ ಅವರು ಗುರುವಾರ ಸಂಸತ್ತಿನಲ್ಲಿ ತಿಳಿಸಿದರು. ಸರ್ತಾಜ್ ಬಗ್ಗೆ ನನಗೆ ಸಹಾನುಭೂತಿಯಿದೆ ಮತ್ತು ಸದನವೂ ನನ್ನೊಂದಿಗಿದೆ ಎಂಬ ವಿಶ್ವಾಸವಿದೆ ಎಂದ ಅವರು, ಸರಕಾರಕ್ಕೆ ಸರ್ತಾಜ್ ಬಗ್ಗೆ ಹೆಮ್ಮೆಯಿದೆ, ಸದಸ್ಯರೂ ಇದೇ ಭಾವನೆಯನ್ನು ಹೊಂದಿದ್ದಾರೆ ಎಂದು ನಾನು ನಂಬಿದ್ದೇನೆ ಎಂದರು.

 ಲಕ್ನೋದ ಹೊರವಲಯದ ಠಾಕೂರಗಂಜ್‌ನ ಮನೆಯೊಂದರಲ್ಲಿ ಅಡಗಿದ್ದ ಸೈಫುಲ್ಲಾ ್ಲ(22) ಎಟಿಎಸ್ ಕಮಾಂಡೋಗಳ 12 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಕೊಲ್ಲಲ್ಪಟ್ಟಿದ್ದ.

ಸಣ್ಣ ಚರ್ಮದ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾನ್ಪುರ ನಿವಾಸಿ ಸರ್ತಾಜ್ ಬುಧವಾರ ಸೈಫುಲ್ಲಾನ ಶವವನ್ನು ಸ್ವೀಕರಿಸಲು ನಿರಾಕರಿಸಿದ್ದರು. ಮಗನನ್ನು ದೇಶದ್ರೋಹಿ ಎಂದು ಖಂಡಿಸಿದ್ದ ಅವರು, ದೇಶಕ್ಕೆ ಸೇರದವನು ನನಗೆ ಹೇಗೆ ಸೇರುತ್ತಾನೆ ಎಂದು ಪ್ರಶ್ನಿಸಿದ್ದರು.

ಸೈಫುಲ್ಲಾ ಸದಸ್ಯನಾಗಿದ್ದ ಒಂಭತ್ತು ಜನರ ಗುಂಪು ‘ಐಸಿಸ್ ಘಟಕ ’ಎಂದು ಸ್ವಯಂಪ್ರೇರಿತವಾಗಿ ಘೋಷಿಸಿಕೊಂಡಿದ್ದು, ಅದು ಯಾವುದೇ ಬಾಹ್ಯ ನೆರವು ಹೊಂದಿರಲಿಲ್ಲ ಎಂದು ಉತ್ತರ ಪ್ರದೇಶ ಪೊಲಿಸರು ಹೇಳಿದ್ದರೆ, ಬಹುಶಃ ಭಾರತದ ಹೊರಗಿನಿಂದ ಚಾಟ್ ರೂಮ್‌ಗಳು ಮತ್ತು ಫೋನ್ ಕರೆಗಳ ಮೂಲಕ ನಿರ್ವಾಹಕರು ಈ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದರು ಎಂಬ ಸಂಕೇತಗಳಿವೆ ಎಂದು ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಎನ್‌ಐಎದ ಕೆಲವರು ಸೇರಿದಂತೆ ಇತರ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಲೇಜು ವಿದ್ಯಾಭ್ಯಾಸವನ್ನು ಅರ್ಧಕ್ಕೇ ತೊರೆದಿದ್ದ ಸೈಫುಲ್ಲಾ ಎರಡು ತಿಂಗಳ ಹಿಂದೆ ತಂದೆಯೊಡನೆ ಜಗಳವಾಡಿ, ಮರುದಿನವೇ ಮನೆ ಬಿಟ್ಟು ಹೋಗಿದ್ದ. ತಾನು ಸೌದಿ ಅರೇಬಿಯಾದಲ್ಲಿ ದುಡಿಯಲು ಬಯಸುತ್ತಿದ್ದೇನೆ ಎಂದು ಆತ ಹೇಳಿದ್ದರಿಂದ ಸೌದಿ ವೀಸಾಕ್ಕಾಗಿ ಆತ ಮುಂಬೈಗೆ ಹೋಗಿರಬಹುದೆಂದು ಮನೆಯವರು ನಂಬಿದ್ದರು. ಆತ ಸೌದಿಗೆ ಹೋಗುವುದನ್ನು ಸರ್ತಾಜ್ ವಿರೋಧಿಸಿದ್ದರು.

ಸರ್ತಾಜ್‌ರ ಮೂವರು ಪುತ್ರರಲ್ಲಿ ಸೈಫುಲ್ಲಾ ಕಿರಿಯವನಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News