ಮ.ಪ್ರ.ರೈಲು ಸ್ಫೋಟ,ಲಕ್ನೋ ಎನ್‌ಕೌಂಟರ್ ತನಿಖೆಯ ಹೊಣೆ ಎನ್‌ಐಎಗೆ:ರಾಜನಾಥ್

Update: 2017-03-09 12:43 GMT

ಹೊಸದಿಲ್ಲಿ,ಮಾ.9: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಲಕ್ನೋ ಎನ್‌ಕೌಂಟರ್ ಸೇರಿದಂತೆ ಶಂಕಿತ ಭಯೋತ್ಪಾದನೆ ಪ್ರಕರಣಗಳ ತನಿಖೆಯನ್ನು ನಡೆಸಲಿದೆ ಎಂದು ಗೃಹಸಚಿವ ರಾಜನಾಥ ಸಿಂಗ್ ಅವರು ಗುರುವಾರ ಲೋಕಸಭೆಯಲ್ಲಿ ತಿಳಿಸಿದರು. ಮಂಗಳವಾರ ಬೆಳಿಗ್ಗೆ ಮಧ್ಯಪ್ರದೇಶದಲ್ಲಿ ಭೋಪಾಲ-ಉಜ್ಜೈನ್ ರೈಲಿನಲ್ಲಿ ಸಂಭವಿಸಿದ್ದ ಸ್ಫೋಟದೊಂದಿಗೆ ನಂಟು ಹೊಂದಿದ್ದ ಶಂಕಿತ ಭಯೋತ್ಪಾದಕ ಮುಹಮ್ಮದ್ ಸೈಫುಲ್ಲಾ ಬುಧವಾರ ಬೆಳಗಿನ ಜಾವ ಲಕ್ನೋದ ಹೊರವಲಯದ ಠಾಕೂರಗಂಜ್‌ನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ.

 ಸೈಫುಲ್ಲಾನನ್ನು ಉ.ಪ್ರದೇಶ ಪೊಲೀಸರು ಕೊಂದಿದ್ದು, ಭಯೋತ್ಪಾದನೆ ಆರೋಪದಲ್ಲಿ ಆರು ಜನರನ್ನು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಸಿಂಗ್ ಹೇಳಿಕೆಯಲ್ಲಿ ತಿಳಿಸಿದರು.

  ಹತ ಭಯೋತ್ಪಾದಕನ ತಂದೆ ಮುಹಮ್ಮದ್ ಸರ್ತಾಜ್‌ರನ್ನು ಪ್ರಶಂಸಿಸಿದ ಸಿಂಗ್, ಸೈಫುಲ್ಲಾ ತನ್ನ ಮಗನೇ ಅಲ್ಲ. ದೇಶಕ್ಕೆ ನಿಷ್ಠನಾಗದವನು ತಮಗೆ ಹೇಗೆ ನಿಷ್ಠನಾಗಿರುತ್ತಾನೆ ಎನ್ನುವ ಮೂಲಕ ಸರ್ತಾಜ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಮಗನ ಶವವನ್ನು ಪಡೆಯಲು ನಿರಾಕರಿಸಿದ್ದಾರೆ ಎಂದು ಹೇಳಿದ್ದನ್ನು ಸದಸ್ಯರು ಮೇಜು ಬಡಿದು ಸ್ವಾಗತಿಸಿದರು.

  ಸರಕಾರಕ್ಕೆ ಸರ್ತಾಜ್ ಬಗ್ಗೆ ಹೆಮ್ಮೆಯಿದೆ, ಸದನವೂ ಇದೇ ಭಾವನೆಯನ್ನು ಹೊಂದಿದೆ ಎಂದು ತಾನು ನಂಬಿದ್ದೇನೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News