ಶಿವಸೇನೆಯ ನೈತಿಕ ಪೊಲೀಸ್‌ಗಿರಿ ಪ್ರಕರಣ : ಯುಡಿಎಫ್ ಪಾತ್ರ ಇರುವ ಬಗ್ಗೆ ಶಂಕೆ - ಪಿಣರಾಯಿ ವಿಜಯನ್
ತಿರುವನಂತಪುರಂ, ಮಾ.9: ನೈತಿಕ ಪೊಲೀಸ್‌ಗಿರಿಯ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ವಿಪಕ್ಷ ಯುಡಿಎಫ್ ಶಾಸಕರು ಹಾಗೂ ಆಳುವ ಪಕ್ಷದ ಶಾಸಕರ ಮಧ್ಯೆ ವಾದವಿವಾದ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಹಂತ ತಲುಪಿದ ಘಟನೆ ಕೇರಳ ವಿಧಾನಸಭೆಯಲ್ಲಿಂದು ನಡೆಯಿತು.
ಕೊಚ್ಚಿಯಲ್ಲಿ ಬುಧವಾರ ಶಿವಸೇನೆ ಕಾರ್ಯಕರ್ತರು ನಡೆಸಿದರು ಎನ್ನಲಾದ ನೈತಿಕ ಪೊಲೀಸ್‌ಗಿರಿಯೂ ಸೇರಿದಂತೆ ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಯ ಬಗ್ಗೆ ಯುಡಿಎಫ್ ಮಂಡಿಸಿದ ನಿಲುವಳಿ ಸೂಚನೆ ನೋಟಿಸ್ ಕುರಿತು ಶೂನ್ಯವೇಳೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭ ಗದ್ದಲ ಆರಂಭವಾಯಿತು. ಕೊಚ್ಚಿಯಲ್ಲಿ ಶಿವಸೇನೆ ಕಾರ್ಯಕರ್ತರನ್ನು ವಿಪಕ್ಷಗಳು ಬಾಡಿಗೆಗೆ ಪಡೆದಿರುವ ಬಗ್ಗೆ ಸಂದೇಹವಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದಾಗ ಗದ್ದಲ ಹೆಚ್ಚಿತು. ಕೊಚ್ಚಿ ಘಟನೆಯಲ್ಲಿ ಪೊಲೀಸರ ನಿಷ್ಕ್ರಿಯತೆ ಖಂಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಯುಡಿಎಫ್ ಸದಸ್ಯರು ಈ ಹೇಳಿಕೆಯಿಂದ ಕೆರಳಿದರು.
ಬುಧವಾರ ನಡೆದ ಘಟನೆಯಲ್ಲಿ ನಿಮ್ಮ (ಯುಡಿಎಫ್) ಪಾತ್ರ ಇರುವ ಬಗ್ಗೆ ನನಗೆ ಸಂದೇಹವಿದೆ ಎಂದು ವಿಜಯನ್ ಹೇಳಿದಾಗ ಕೋಪೋದ್ರಿಕ್ತರಾದ ಯುಡಿಎಫ್ ಸದಸ್ಯರು ಮುಖ್ಯಮಂತ್ರಿಯವರ ಆಸನದತ್ತ ಧಾವಿಸಿದರು. ತಕ್ಷಣ ಎಲ್‌ಡಿಎಫ್ ಸದಸ್ಯರು ಭದ್ರತಾ ವರ್ತುಲದಂತೆ ಮುಖ್ಯಮಂತ್ರಿಯವರ ಸುತ್ತ ನಿಂತು ರಕ್ಷಣೆ ನೀಡಿದರು.
ಈ ಸಂದರ್ಭ ಕೋಪೋದ್ರಿಕ್ತ ಉಭಯ ಬಣಗಳ ಸದಸ್ಯರು ಪರಸ್ಪರ ದೂಷಿಸತೊಡಗಿದರು. ಮುಖ್ಯಮಂತ್ರಿ ಕೂಡಾ ವಿಪಕ್ಷಗಳ ಸದಸ್ಯರತ್ತ ಬೊಟ್ಟು ಮಾಡಿ ಏನೋ ಹೇಳುತ್ತಿರುವುದು ಕಂಡು ಬಂದಿತು. ಈ ಬಗ್ಗೆ ಬಳಿಕ ಸ್ಪಷ್ಟೀಕರಣ ನೀಡಿದ ಮುಖ್ಯಮಂತ್ರಿಗಳು, ವಿಪಕ್ಷ ಸದಸ್ಯರೋರ್ವರು ತನ್ನನ್ನು ಬೆದರಿಸುವ ರೀತಿ ವರ್ತಿಸಿದರು. ಆಗ ತಾನು- ಈ ರೀತಿಯ ಬೆದರಿಕೆಯನ್ನು ಸಾಕಷ್ಟು ಕಂಡಿದ್ದೇನೆ. ಇವೆಲ್ಲಾ ನಡೆಯದು ಎಂದು ಹೇಳಿದ್ದಾಗಿ ತಿಳಿಸಿದರು. ಮುಖ್ಯಮಂತ್ರಿ ಕೂಡಾ ಸದನದ ಬಾವಿಯತ್ತ ಧಾವಿಸಿದ್ದರು ಎಂಬ ವಿಪಕ್ಷಗಳ ಆರೋಪವನ್ನು ಅವರು ತಳ್ಳಿಹಾಕಿದರು.ವಿಧಾನಸಭೆಯಲ್ಲಿ ಕಾವೇರಿದ ಪರಿಸ್ಥಿತಿಯನ್ನು ಗಮನಿಸಿದ ಸ್ಪೀಕರ್, ಸದನವನ್ನು ತಾತ್ಕಾಲಿಕವಾಗಿ ಮುಂದೂಡುವುದಾಗಿ ಪ್ರಕಟಿಸಿದರು.
ಸುಮಾರು ಒಂದು ಗಂಟೆಯ ಬಳಿಕ ಸದನ ಮರುಸಮಾವೇಶಗೊಂಡಾಗ , ಯುಡಿಎಫ್ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮುಖ್ಯಮಂತ್ರಿ ನ್ನ ಹೇಳಿಕೆ ವಾಪಾಸು ಪಡೆಯಲು ನಿರಾಕರಿಸಿದ್ದಾರೆ ಎಂದು ದೂರಿದ ಯುಡಿಎಫ್, ಕಲಾಪವನ್ನು ಬಹಿಷ್ಕರಿಸಿತು.
ಇದಕ್ಕೂ ಮೊದಲು, ನಡೆದಿದ್ದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಿಲ, ಗುರುವಾಯೂರಿನಲ್ಲಿ ಬುಧವಾರ ನಡೆದಿದ್ದ ಘಟನೆಯೊಂದರ ಬಗ್ಗೆ ಸದನದ ಗಮನ ಸೆಳೆದರು. ಗುರುವಾಯೂರಿನ ಕೃಷ್ಣ ದೇವಸ್ಥಾನದಲ್ಲಿ ನಡೆಯಲಿದ್ದ ಉತ್ಸವದ ಸಂದರ್ಭಕ್ಕಾಗಿ 15 ಸಾವಿರ ಲೀಟರ್ ನೀರನ್ನು ಸಾಗಿಸಲಾಗುತ್ತಿತ್ತು. ಈ ನೀರನ್ನು ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಲಾರಿಯನ್ನು ಅಡ್ಡಗಟ್ಟಿದ ಕೆಲವರು, ನೀರನ್ನು ಹೊರಚೆಲ್ಲಿ ಬರಿದು ಮಾಡಿದ್ದಾರೆ. ಈ ಘಟನೆ ಪೊಲೀಸರ ಸಮ್ಮುಖದಲ್ಲೇ ನಡೆದಿದೆ ಎಂದವರು ತಿಳಿಸಿದರು.
ಘಟನೆಯಲ್ಲಿ ಎಲ್‌ಡಿಎಫ್‌ಗೆ ಸೇರಿದ ಇಬ್ಬರು ಕೌನ್ಸಿಲರ್‌ಗಳು ಕೂಡಾ ಶಾಮೀಲಾಗಿದ್ದಾರೆ ಎಂದು ಗುರುವಾಯೂರು ಶಾಸಕ ಕೆ.ವಿ.ಅಬ್ದುಲ್ ಖಾದರ್ ಆರೋಪಿಸಿದರು. ನೀರನ್ನು ಹೊರತೆಗೆಯುವ ಬಗ್ಗೆ ವಿವಾದದಿಂದ ಈ ಘಟನೆ ನಡೆದಿದೆ. ಜಿಲ್ಲಾಧಿಕಾರಿ ಮಧ್ಯಪ್ರವೇಶದ ಬಳಿಕ ವಿವಾದ ಬಗೆಹರಿದಿದೆ ಎಂದರು. ಖಾದರ್ ಅವರು ಪ್ರಕರಣವನ್ನು ರಾಜಕೀಯಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಚೆನ್ನಿತ್ತಿಲ ಆರೋಪಿಸಿ, ಅವರ ಬಗ್ಗೆ ಕೆಲವು ಆಕ್ಷೇಪಾರ್ಹ ಪದಗಳನ್ನು ಬಳಸಿ ಟೀಕೆ ಮಾಡಿದರು.
ಬಳಿಕ ಈ ಪದಗಳನ್ನು ಸ್ಪೀಕರ್ ಕಡತದಿಂದ ತೆಗೆದುಹಾಕಲು ತಿಳಿಸಿದರು. ಸದನದಲ್ಲಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಮಾತನಾಡಿ, ರಾಜ್ಯ ಸರಕಾರವು ನೈತಿಕ ಪೊಲೀಸ್‌ಗಿರಿಯನ್ನು ಮಟ್ಟಹಾಕಲು ದೃಢಸಂಕಲ್ಪ ಮಾಡಿದ್ದು ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕೇರಳ ಸಮಾಜ ವಿರೋಧಿ ಕೃತ್ಯ ತಡೆ ಕಾಯ್ದೆ 2007ರ ಅನ್ವಯ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.
ಘಟನೆಯಲ್ಲಿ ಪೊಲೀಸರ ತಪ್ಪಿನ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿ, ಪ್ರಕರಣಕ್ಕೆ ಸಂಬಂಧಿಸಿ ಓರ್ವ ಸಬ್ ಇನ್‌ಸ್ಪೆಕ್ಟರ್‌ರನ್ನು ಅಮಾನತುಗೊಳಿಸಲಾಗಿದೆ ಮತ್ತು ಏಳು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.