×
Ad

ಸದ್ದು ಮಾಡುತ್ತಿದೆ ಕೇರಾಫ್ ಸಾಯಿರಾ ಬಾನು

Update: 2017-03-11 18:55 IST

ತನ್ನ ಮಗನ ಕನಸನ್ನು ನನಸಾಗಿಸಲು ತಾಯಿಯೊಬ್ಬಳ ಮಹಾತ್ಯಾಗ ಹಾಗೂ ಎಲ್ಲ ರೀತಿಯ ಅಡೆತಡೆಗಳನ್ನು, ಕಷ್ಟಗಳನ್ನು ಸಹಿಸಿ ಆತನ ಬಾಳಿಗೆ ಬೆಳಕಾಗುವ ಹೃದಯಸ್ಪರ್ಶಿ ಕಥಾವಸ್ತುವನ್ನು ಹೊಂದಿರುವ ‘ಕೇರಾಫ್ ಸಾಯಿರಾಬಾನು’ ಬಿಡುಗಡೆಗೆ ಮುನ್ನವೇ ಮಲಯಾಳಂ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕೆಲವು ವಾರಗಳ ಹಿಂದೆ ಚಿತ್ರದ ಟೀಸರ್ ಬಿಡುಗಡೆಯಾದಾಗಿನಿಂದ ಕೇರಾಫ್ ಸಾಯಿರಾಬಾನು ಬಗ್ಗೆ ಮಲಯಾಳಂ ಪ್ರೇಕ್ಷಕರ ನಿರೀಕ್ಷೆಗಳು ಮುಗಿಲುಮುಟ್ಟಿವೆ. ಮಂಜುವಾರಿಯರ್ ಹಾಗೂ ಶೇನ್ ನಿಗಮ್ ತಾಯಿ ಹಾಗೂ ಮಗನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಮಾರು 25 ವರ್ಷಗಳ ಬಳಿಕ ಅಮಲಾ ಅಕ್ಕಿನೇನಿ ಈ ಚಿತ್ರದ ಮೂಲಕ ಮಲಯಾಳಂ ಸಿನೆಮಾರಂಗಕ್ಕೆ ಪುನರಾಗಮಿಸಿದ್ದಾರೆ.

ಪ್ರಶಸ್ತಿ ವಿಜೇತ ಕಿರುಚಿತ್ರ ‘ಮೂನಾಮಿಡಂ’ ಮೂಲಕ ಗಮನಸೆಳೆದಿದ್ದ ಆ್ಯಂಟನಿ ಸೋನಿ, ಈ ಚಿತ್ರದೊಂದಿಗೆ ಮೊದಲ ಬಾರಿಗೆ ನಿರ್ದೇಶಕನಾಗಲಿದ್ದಾರೆ. ಮಲಯಾಳಂನ ಜನಪ್ರಿಯ ನಿರ್ದೇಶಕ ರೋಶನ್ ಆ್ಯಂಡ್ರೂಸ್ ಅವರ ಸಹಾಯಕರಾಗಿಯೂ ಸೋನು ಆ್ಯಂಟನಿ ಕೆಲಸ ಮಾಡಿದ್ದರು. ‘ಕೇರಾಫ್ ಸಾಯಿರಾ ಬಾನು’ ನೈಜಬದುಕಿನ ಕಥೆಯೊಂದನ್ನು ಆಧರಿಸಿದ ಚಿತ್ರವೆಂದುು ಆ್ಯಂಟನಿ ಸೋನಿ ಹೇಳುತ್ತಾರೆ.

‘ಮೂನಾಮಿಡಂ’ ಕಿರುಚಿತ್ರದ ಪ್ರದರ್ಶನದ ವೇಳೆ, ಅವರು ಇದೇ ಕಥಾಪಾತ್ರವನ್ನು ಹೋಲುವ ತಾಯಿಯೊಬ್ಬರನ್ನು ಭೇಟಿಯಾಗಿದ್ದರಂತೆ. ಆಕೆ ತನ್ನ ಮಗನ ಪ್ರತಿನಿಧಿಯಾಗಿ ಚಿತ್ರಪ್ರದರ್ಶನಕ್ಕೆ ಆಗಮಿಸಿದ್ದರು. ಚಿತ್ರನಿರ್ಮಾಣ, ತಂತ್ರಜ್ಞಾನ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ಆ ಮಹಿಳೆ ತನ್ನ ಪುತ್ರನ ಹಾಗೂ ಆತನ ಸಾಧನೆಯ ಬಗ್ಗೆ ಭಾವುಕತೆಯೊಂದಿಗೆ ಮಾತನಾಡಿದ್ದರಂತೆ. ‘‘ತಾಯಿ-ಮಗನ ಈ ಅನನ್ಯ ಬಾಂಧವ್ಯವು ನನ್ನನ್ನು ಭಾವಪರವಶಗೊಳಿಸಿತು. ಅದುವೇ ನನ್ನ ಈ ಚಿತ್ರದ ಕಥೆಗೆ ಸ್ಫೂರ್ತಿ ನೀಡಿತು’’ ಎಂದು ಆ್ಯಂಟನಿ ನೆನಪಿಸಿಕೊಳ್ಳುತ್ತಾರೆ.

‘ಮೂನಾಮಿಡಂ’ ಕಿರುಚಿತ್ರಕ್ಕೆ ಕಥೆ ಬರೆದಿದ್ದ ಆರ್.ಜೆ. ಶೇನ್ ಅವರೇ ಈ ಚಿತ್ರಕ್ಕೂ ಸ್ಕ್ರಿಪ್ಟ್ ರಚಿಸಿದ್ದಾರೆ. ‘‘ ಹೌ ಓಲ್ಡ್ ಆರ್ ಯು’’ ಚಿತ್ರದಲ್ಲಿ ಶೇನ್ ಅವರು ರೋಶನ್‌ಗೆ ನೆರವಾಗಿದ್ದರು. ಆ ಸಂದರ್ಭದಲ್ಲಿ ಆ್ಯಂಟನಿ ಸೋನಿ ಅವರಿಗೆ ಶಾನ್‌ರ ಪರಿಚಯವಾಗಿತ್ತು. ಇಬ್ಬರೂ ಒಂದು ಒಳ್ಳೆಯ ಚಿತ್ರವೊಂದನ್ನು ನಿರ್ಮಿಸಬೇಕೆಂಬ ಬಗ್ಗೆ ಯೋಚನೆ ಹುಟ್ಟಿತಂತೆ. ಅದರ ಫಲವೇ ಕೇರಾಫ್ ಸಾಯಿರಾಬಾನು.

ಚಿತ್ರದ ಕಥಾನಾಯಕಿ ಸಾಯಿರಾಬಾನು ಪಾತ್ರಕ್ಕೆ ಮಂಜುವಾರಿಯರ್ ಮೊದಲಿನಿಂದಲೇ ನನ್ನ ಪ್ರಥಮ ಆಯ್ಕೆಯಾಗಿದ್ದರು ಎಂದು ಆ್ಯಂಟನಿ ಸೋನಿ ಹೇಳುತ್ತಾರೆ. ಚಿತ್ರದಲ್ಲಿ ಅವರದು ಪೋಸ್ಟ್‌ವುಮನ್ ಪಾತ್ರ. ‘ಹೌ ಓಲ್ಡ್ ಆರ್ ಯು’ ಚಿತ್ರದ ಶೂಟಿಂಗ್ ಸಂದರ್ಭದಲ್ಲ್ಲಿ ತನಗೆ ಮಂಜುವಾರಿಯರ್ ಪರಿಚಯವಾಗಿತ್ತು. ಆಕೆಯ ಅಭಿನಯ ಸಾಮರ್ಥ್ಯದ ಬಗ್ಗೆ ತನಗೆ ಅಪಾರವಿಶ್ವಾಸವಿದೆಯೆಂದು ಆ್ಯಂಟನಿ ಹೇಳುತ್ತಾರೆ.

ಚಿತ್ರದ ಕಥೆಯ ಬಗ್ಗೆ ಭರವಸೆಯಿದ್ದರೂ, ಆಕೆ ತಾಯಿಯ ಪಾತ್ರದಲ್ಲಿ ನಟಿಸಲು ಒಪ್ಪುವರೇ ಎಂಬ ಬಗ್ಗೆ ತುಸು ಸಂದೇಹವಿತ್ತು. ಆದರೆ ವಿಷಯವನ್ನು ಅವರ ಮುಂದಿಟ್ಟಾಗ ಆಕೆ ಯಾವುದೇ ಯೋಚನೆ ಮಾಡದೆ ಗ್ರೀನ್‌ಸಿಗ್ನಲ್ ನೀಡಿದರು. ಯಾಕೆಂದರೆ ಚಿತ್ರಕಥೆಯನ್ನು ಆಕೆ ಅಪಾರವಾಗಿ ಮೆಚ್ಚಿಕೊಂಡಿದ್ದರು ಎಂದು ಆ್ಯಂಟನಿ ಸಂತಸದಿಂದ ಹೇಳುತ್ತಾರೆ.

ನಾಯಕ ನಟ ಶೇನ್ ಚಿತ್ರದಲ್ಲಿ ಕಾನೂನು ವಿದ್ಯಾರ್ಥಿ. ಆತನಿಗೆ ತನ್ನ ತಂದೆಯಂತೆಯೇ ಛಾಯಾಚಿತ್ರಗ್ರಾಹಕನಾಗಬೇಕೆಂಬ ಹಂಬಲವಿರುತ್ತದೆ.

ಚಿತ್ರದ ಕಥೆಯು ಕೊಚ್ಚಿಯಲ್ಲಿ ನಡೆಯುವುದಾದರೂ, ಕಥಾನಾಯಕಿ ಮಲಪ್ಪುರಂನವಳು. ಸದಾ ಹಸನ್ಮುಖಿಯಾದ ಸಾಯಿರಾ, ಛಾಯಾಚಿತ್ರಗ್ರಾ ಹಕನಾಗಬೇಕೆಂಬ ತನ್ನ ಮಗನ ಕನಸಿಗೆ ಬೆಂಬಲವಾಗುತ್ತಾಳೆ. ಆದರೆ ಕೆಲವೊಂದು ಘಟನೆಗಳು ತಾಯಿ-ಮಗನ ಬದುಕನ್ನು ಅಲ್ಲೋಲ ಕಲ್ಲೋಲಗೊಳಿಸುತ್ತವೆ’’ ಎಂದು ಆ್ಯಂಟನಿ ಹೇಳುತ್ತಾರೆ.

ಸುಮಾರು 25 ವರ್ಷಗಳ ಬಳಿಕ ಅಮಲಾ ಅವರನ್ನು ಮಲಯಾಳಂ ಚಿತ್ರರಂಗಕ್ಕೆ ವಾಪಸ್ ಕರೆತಂದಿರುವುದು ತನಗೂ ಖುಷಿ ಎನಿಸುತ್ತದೆ ಎನ್ನುತ್ತಾರವರು.

ಕೇರಾಫ್ ಸಾಯಿರಾಬಾನುವಿನಲ್ಲಿ ಪ್ರತಿಭಾವಂತ ಹಾಗೂ ಉದಯೋನ್ಮುಖ ತಾರೆಯರ ದೊಡ್ಡ ದಂಡೇ ಇದೆ. ಶೇನ್‌ಗೆ ನಾಯಕಿಯಾಗಿ ನಿರಂಜನಾ ನಟಿಸಲಿದ್ದು, ಸಿನೆಮಾ ಹಾಗೂ ಟಿವಿ ಕಾರ್ಯಕ್ರಮಗಳ ಮೂಲಕ ಮಲಯಾಳಂ ಪ್ರೇಕ್ಷಕರ ಮನಗೆದ್ದಿರುವ ಬಿಜು ಸೋಪಾನಂ, ಜಾನ್ ಪೌಲ್, ಜಾಯ್ ಮ್ಯಾಥ್ಯೂ, ಇಂದ್ರನ್ಸ್ ಹಾಗೂ ಕೆ.ಬಿ. ಗಣೇಶ್ ಕುಮಾರ್ ಚಿತ್ರದಲ್ಲಿದ್ದಾರೆ. ‘ಮೂನಾಮಿಡಂ’ನಲ್ಲಿ ಆ್ಯಂಟನಿ ಜೊತೆ ಕೆಲಸ ಮಾಡಿರುವ ಅಬ್ದುಲ್ ರಹೀಂ, ಈ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದಾರೆ. ಪ್ರತಿಭಾವಂತ ಮೆಜೊ ಜೋಸೆಫ್ ಸಂಗೀತ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News