ಮಣಿರತ್ನಂ ಸಿನೆಮಾದಲ್ಲಿ ವಿಜಯ್ ವಿಕ್ರಮ್ ರಾಮ್‌ಚರಣ್
ತಮಿಳು ಚಿತ್ರರಂಗದ ಸೂಪರ್‌ಸ್ಟಾರ್‌ಗಳಾಗದ ವಿಜಯ್ ಹಾಗೂ ವಿಕ್ರಮ್, ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿಕೇಳಿಯೇ ಚಿತ್ರರಸಿಕರು ಸಖತ್ ಥ್ರಿಲ್ ಆಗಿದ್ದಾರೆ. ಅಷ್ಟೇ ಅಲ್ಲ, ರೋಜಾ, ನಾಯಗನ್, ಬಾಂಬೆನಂತಹ ಮಹಾನ್ ಚಿತ್ರಗಳನ್ನು ನಿರ್ದೇಶಿಸಿದ ಮಣಿರತ್ನಂ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ತೆಲುಗಿನ ಖ್ಯಾತ ನಟ ರಾಮ್‌ಚರಣ್ ತೇಜಾ ಕೂಡಾ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಸದ್ಯ ಮಣಿರತ್ನಂ ಅವರು ಕಾರ್ತಿ ನಾಯಕನಾಗಿ ನಟಿಸುತ್ತಿರುವ ‘ಕಾಟ್ರುವೆಳಿಯಿಡೈ’ ತಮಿಳು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದನ್ನು ಪೂರ್ತಿಗೊಳಿಸಿದ ಕೂಡಲೇ ಅವರು, ಈ ಮಲ್ಟಿಸ್ಟಾರರ್ ಚಿತ್ರದ ಕೆಲಸವನ್ನು ಆರಂಭಿಸಲಿದ್ದಾರೆ. ಕಾಟ್ರುವೆಳಿಯಿಡೈ ಬಿಡುಗಡೆಯಾದ ಬಳಿಕ ಅವರು ತನ್ನ ಈ ನೂತನ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ.
ತಮಿಳಿನಲ್ಲಿ ತಮ್ಮದೇ ಅದ ವಿಭಿನ್ನ ಇಮೇಜ್ ಹೊಂದಿರುವ ಜನಪ್ರಿಯ ತಾರೆಯರು ವಿಕ್ರಮ್ ಹಾಗೂ ವಿಜಯ್ ಚಿತ್ರದ ಸ್ಕ್ರಿಪ್ಟ್ ಓದಿದ ಬಳಿಕ ಮರುಮಾತನಾಡದೆ ನಟಿಸಲು ಒಪ್ಪಿಕೊಂಡಿದ್ದಾರೆ. ಇಷ್ಟಕ್ಕೂ ಮಣಿರತ್ನಂ ಈ ಹಿಂದೆಯೂ ತಮಿಳಿನಲ್ಲಿ ಮಲ್ಟಿಸ್ಟಾರರ್ ಚಿತ್ರಗಳನ್ನು ನಿರ್ದೇಶಿಸಿದ್ದರು.
ದಳಪತಿ ಚಿತ್ರದಲ್ಲಿ ರಜನಿಕಾಂತ್ ಜೊತೆ ಮಮ್ಮುಟ್ಟಿ, ಅರವಿಂದ್ ಸ್ವಾಮಿ ಅವರನ್ನು ಒಂದುಗೂಡಿಸಿದ್ದ ಮಣಿರತ್ನಂ, ಇದೀಗ ನಿರ್ದೇಶಿಸಲಿರುವ ಈ ಮಲ್ಟಿಸ್ಟಾರರ್ ಚಿತ್ರ ಕೂಡಾ ಭಾರೀ ಯಶಸ್ಸು ಕಾಣಲಿದೆಯೆಂಬ ಭರವಸೆಯನ್ನು ತಮಿಳುಚಿತ್ರರಂಗ ವ್ಯಕ್ತಪಡಿಸುತ್ತಿದೆ. ನಾಯಕಿಯರ ಪಾತ್ರಗಳಿಗೆ ಜನಪ್ರಿಯ ನಟಿಯರನ್ನೇ ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಚಿತ್ರದ ಕಥೆಯ ಬಗ್ಗೆ ಮಣಿರತ್ನಂ ಯಾವುದೇ ಮಾಹಿತಿಯನ್ನು ನೀಡಿಲ್ಲವಾದರೂ ಇದೊಂದು ಗ್ಯಾಂಗ್‌ಸ್ಟರ್ಸ್ ಹಿನ್ನೆಲೆಯ ಸಿನೆಮಾವೆಂಬ ಊಹಾಪೋಹಗಳು ಹರಿದಾಡುತ್ತಿವೆ.