ಬೆಳ್ಳಿತೆರೆಗೆ ಮಹಾನಟಿ ಸಾವಿತ್ರಿ
ತೆಲುಗು ಚಿತ್ರರಂಗದಲ್ಲಿ ದಂತಕತೆಯಾಗಿರುವ ನಟಿ ಸಾವಿತ್ರಿಯ ಬದುಕು ಇದೀಗ ಬೆಳ್ಳಿತೆರೆಯಲ್ಲಿ ಅನಾವರಣಗೊಳ್ಳಲಿದೆ. ಸೂಪರ್‌ಹಿಟ್ ‘ಯೆವಡೆ ಸುಬ್ರಹ್ಮಣ್ಯಂ’ ಚಿತ್ರದ ನಿರ್ದೇಶಕ ನಾಗ್‌ಅಶ್ವಿನ್, ಈ ಅದ್ದೂರಿ ಚಿತ್ರಕ್ಕೆ ಆ್ಯಕ್ಷನ್‌ಕಟ್ ಹೇಳಿದ್ದಾರೆ.
ಸಾವಿತ್ರಿಯ ಬದುಕಿನ ವಿವಿಧ ಹಂತಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡಲಿರುವ ಈ ಬಯೋಪಿಕ್ ಚಿತ್ರಕ್ಕೆ ‘ಮಹಾನಟಿ’ ಎಂದು ಹೆಸರಿಡಲಾಗಿದೆ. ಬಹುಭಾಷಾ ನಟಿ ಕೀರ್ತಿ ಸುರೇಶ್, ನಟಿ ಸಾವಿತ್ರಿಯ ಪಾತ್ರಕ್ಕೆ ಆಯ್ಕೆಯಾಗಿದ್ದ್ಜಾರೆ.
ಅಂದಹಾಗೆ ತೆಲುಗಿನ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಕೂಡಾ ಚಿತ್ರದಲ್ಲಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಿರ್ದೇಶಕ ನಾಗ್‌ಅಶ್ವಿನ್ ಚಿತ್ರದ ಮೊದಲ ಪೋಸ್ಟರನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಳಿಸಿದ್ದು, ಅದು ಈಗಾಗಲೇ ವೈರಲ್ ಆಗಿಬಿಟ್ಟಿದೆ.
ಒಂದೆರಡು ತಿಂಗಳುಗಳಲ್ಲಿ ಸಾವಿತ್ರಿಯು ಸೆಟ್ಟೇರಲಿದ್ದು ಅಶ್ವಿನ್ ಹಾಗೂ ಅವರ ಬಳಗ, ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಮಗ್ನವಾಗಿದೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಸಾವಿತ್ರಿ ತೆಲುಗು,ತಮಿಳು ಭಾಷೆಗಳಲ್ಲಿಯೂ ಏಕಕಾಲದಲ್ಲಿ ತಯಾರಾಗಲಿದೆ.
ಮಲಯಾಳಂಗೂ ಚಿತ್ರ ಡಬ್ ಆಗಲಿದೆ. ಇನ್ನೂ ಒಂದು ಕುತೂಹಲಕಾರಿ ವಿಷಯವೆಂದರೆ ಮಲಯಾಳಂ ಚಿತ್ರರಂಗದ ಜನಪ್ರಿಯ ನಟ, ಪ್ರೇಮಂ ಖ್ಯಾತಿಯ ನಿವಿನ್ ಪೌಲಿ ಕೂಡಾ ಸಾವಿತ್ರಿಯಲ್ಲಿ ಪ್ರಧಾನ ಪಾತ್ರವೊಂದರಲ್ಲಿ ಅಭಿನಯಿಸುವ ಸಾಧ್ಯತೆಯಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿರುವುದಾಗಿ ಚಿತ್ರತಂಡದ ಅಂಬೋಣ.