×
Ad

ಉತ್ತರ ಕೊರಿಯದಲ್ಲಿ ಸಿಲುಕಿಕೊಂಡಿರುವ ಮಲೇಶ್ಯನ್ನರ ವಾಪಸಾತಿಗೆ ಶೀಘ್ರವೇ ಮಾತುಕತೆ: ಮಲೇಶ್ಯ

Update: 2017-03-12 21:46 IST

ಕೌಲಾಲಂಪುರ, ಮಾ. 12: ಉತ್ತರ ಕೊರಿಯದಲ್ಲಿ ಸಿಲುಕಿಕೊಂಡಿರುವ ಒಂಬತ್ತು ಮಲೇಶ್ಯನ್ನರನ್ನು ವಾಪಸ್ ಕರೆತರುವ ವಿಚಾರದಲ್ಲಿ ಪ್ಯಾಂಗ್‌ಯಾಂಗ್ ಜೊತೆ ಮುಂದಿನ ದಿನಗಳಲ್ಲಿ ಮಲೇಶ್ಯ ಔಪಚಾರಿಕ ಮಾತುಕತೆಗಳನ್ನು ನಡೆಸುವುದು ಎಂದು ಮಲೇಶ್ಯದ ವಿದೇಶ ಸಚಿವ ಅನಿಫಾಹ್ ಅಮನ್ ಶನಿವಾರ ಹೇಳಿದ್ದಾರೆ.

ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಪರಿತ್ಯಕ್ತ ಸಹೋದರ ಕಿಮ್ ಜಾಂಗ್ ನಾಮ್ ಅವರ ಹತ್ಯೆಗೆ ಸಂಬಂಧಿಸಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ, ತನ್ನ ದೇಶದಿಂದ ಮಲೇಶ್ಯನ್ನರು ಹೊರಹೋಗುವುದನ್ನು ಉತ್ತರ ಕೊರಿಯ ನಿಷೇಧಿಸಿತ್ತು.

ನಾಮ್‌ರನ್ನು ಫೆಬ್ರವರಿ 13ರಂದು ಕೌಲಾಲಂಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಅತ್ಯಂತ ವಿಷಕಾರಿ ರಾಸಾಯನಿಕ ‘ವಿಎಕ್ಸ್ ನರ್ವ್ ಏಜಂಟ್’ ಪ್ರಯೋಗಿಸಿ ಹತ್ಯೆಗೈದಿದ್ದಾರೆ.

ಮಾತುಕತೆಗಳನ್ನು ಆರಂಭಿಸಲು ಸಿದ್ಧ ಎನ್ನುವ ಸೂಚನೆಯನ್ನು ಉತ್ತರ ಕೊರಿಯ ನೀಡಿದೆ ಎಂದು ಅನಿಫಾಹ್ ಅಮನ್ ತಿಳಿಸಿದರು.

‘‘ಮಾತುಕತೆ ಆರಂಭಿಸಲು ಅವರು ಬಯಸಿದ್ದಾರೆ. ಅವರ ಬೇಡಿಕೆಗಳೇನು ಎನ್ನುವುದ ನಮಗೆ ತಿಳಿದಿಲ್ಲ. ಉತ್ತಮ ಫಲಿತಾಂಶವನ್ನು ಪಡೆಯಲು ನಾವು ಏನು ಮಾಡಬಹುದು ಎನ್ನುವುದನ್ನು ನಾವು ಕಂಡುಹಿಡಿಯಬೇಕಾಗಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News