×
Ad

ಆಂಧ್ರಪ್ರದೇಶ ಶಾಸಕ ಭೂಮಾ ರೆಡ್ಡಿ ನಿಧನ

Update: 2017-03-13 12:52 IST

ಹೈದರಾಬಾದ್, ಮಾ.13: ಆಂಧ್ರಪ್ರದೇಶದ ಶಾಸಕ ಭೂಮಾ ರೆಡ್ಡಿ(53 ವರ್ಷ)ರವಿವಾರ ಹೃದಯಾಘಾತದಿಂದ ನಿಧನರಾದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ಮೃತರು ಶಾಸಕಿ ಅಖಿಲಾ ಪ್ರಿಯಾ ಸಹಿತ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕರ್ನೂಲ್ ಜಿಲ್ಲೆಯ ತಮ್ಮ ನಿವಾಸದಲ್ಲಿ ರವಿವಾರ ಬೆಳಗ್ಗೆ ದಿನಪತ್ರಿಕೆ ಓದುತ್ತಿದ್ದಾಗ ಶಾಸಕ ಭೂಮಾ ರೆಡ್ಡಿಗೆ ಹೃದಯಾಘಾತವಾಗಿತ್ತು. ಅವರನ್ನು ಚಿಕಿತ್ಸೆಗಾಗಿ ನಂದ್ಯಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ನೀಡುತ್ತಿದ್ದಾಗಲೇ ಮೃತಪಟ್ಟಿದ್ದಾರೆ ಎಂದು ಸಂಬಂಧಿ ಹಾಗೂ ಎಂಎಲ್‌ಎ ಮೋಹನ್ ರೆಡ್ಡಿ ತಿಳಿಸಿದ್ದಾರೆ.

ಭೂಮಾರೆಡ್ಡಿ 2014ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಂದ್ಯಾಲ್ ಕ್ಷೇತ್ರದಿಂದ ಚುನಾಯಿತರಾಗಿದ್ದರು. 2016ರ ಫೆಬ್ರವರಿಯಲ್ಲಿ ಟಿಡಿಪಿಗೆ ಪಕ್ಷಾಂತರಗೊಂಡಿದ್ದರು.

ಕರ್ನೂಲ್ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದ ರೆಡ್ಡಿ 1992ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿ ವಿಧಾನಸಭೆಗೆ ಚುನಾಯಿತರಾಗಿದ್ದರು. 1994ರಲ್ಲಿ ಮತ್ತೊಮ್ಮೆ ಚುನಾಯಿತರಾಗಿದ್ದರು. 1996ರಲ್ಲಿ ನಂದ್ಯಾಲ್‌ನಿಂದ ಲೋಕಸಭೆಯ ಉಪ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. 1998 ಹಾಗೂ 1999ರಲ್ಲಿ ತೆಲುಗು ದೇಶಂ ಸಂಸದರಾಗಿದ್ದರು. 2008ರಲ್ಲಿ ಟಿಡಿಪಿಯನ್ನು ತ್ಯಜಿಸಿ ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಪಕ್ಷವನ್ನು ಸೇರ್ಪಡೆಯಾಗಿದ್ದರು. 2009ರ ಚುನಾವಣೆಯಲ್ಲಿ ಸೋತಿದ್ದರು.

2011ರಲ್ಲಿ ರೆಡ್ಡಿ ಹಾಗೂ ಅವರ ಪತ್ನಿ ಶೋಭಾ ನಾಗಿ ರೆಡ್ಡಿ ವೈಎಸ್‌ಆರ್ ಕಾಂಗ್ರೆಸ್‌ನ್ನು ಸೇರಿದ್ದರು. ನಾಲ್ಕು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದ ಶೋಭಾ 2014ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ರೆಡ್ಡಿಯ ಪುತ್ರಿ ಅಖಿಲಾ ಪ್ರಿಯಾ ವೈಎಸ್‌ಆರ್ ಟಿಕೆಟ್‌ನಲ್ಲಿ ಶಾಸಕಿಯಾಗಿ ಆಯ್ಕೆಯಾಗಿದ್ದರು. 2016ರಲ್ಲಿ ರೆಡ್ಡಿ ಹಾಗೂ ಪುತ್ರಿ ಅಖಿಲಾ ಟಿಡಿಪಿಗೆ ವಾಪಸಾಗಿದ್ದರು.

ರೆಡ್ಡಿ ನಿಧನಕ್ಕೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ವೈಎಸ್ ಜಗಮೋಹನ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News