ಒಬ್ಬ ಬಿಜೆಪಿ ಸಿಎಂ ಕೇಂದ್ರಕ್ಕೆ, ಪಕ್ಷದ ಒಬ್ಬ ಪ್ರ . ಕಾರ್ಯದರ್ಶಿಗೆ ಸಿಎಂ ಹುದ್ದೆ !
ಹೊಸದಿಲ್ಲಿ, ಮಾ.13: ರಕ್ಷಣಾ ಸಚಿವರಾಗಿರುವ ಮನೋಹರ್ ಪಾರಿಕ್ಕರ್ ಗೋವಾದ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟವನ್ನು ಶೀಘ್ರ ಪುನರಚನೆ ಮಾಡಲಾಗುವುದು ಎಂಬ ಮಾತು ಕೇಳಿ ಬರುತ್ತಿದೆ. ವಿತ್ತ ಸಚಿವ ಅರುಣ್ ಜೇಟ್ಲೀಗೆ ರಕ್ಷಣಾ ಸಚಿವರ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಿಕೊಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಖಂಡಿತವಾಗಿಯೂ ಸಚಿವ ಸಂಪುಟದಲ್ಲಿ ಬದಲಾವಣೆ ಆಗಲಿದೆ.
ಬಿಜೆಪಿ ಆಡಳಿತದ ರಾಜ್ಯಗಳಿಂದ ಕನಿಷ್ಠ ಓರ್ವ ಮುಖ್ಯಮಂತ್ರಿ ಕೇಂದ್ರ ಸರಕಾರಕ್ಕೆ ಸೇರ್ಪಡೆಗೊಳ್ಳುವುದು ಖಚಿತ. ಪಕ್ಷದ ಓರ್ವ ಹಿರಿಯ ಪ್ರಧಾನ ಕಾರ್ಯದರ್ಶಿಯನ್ನು ಅವರ ಬದಲಿಯಾಗಿ ರಾಜ್ಯಕ್ಕೆ ಕಳುಹಿಸುವ ಸಾಧ್ಯತೆಯಿದೆ. ತಾತ್ಕಾಲಿಕವಾಗಿ ರಕ್ಷಣಾ ಇಲಾಖೆಯ ಹೊಣೆಯನ್ನು ವಿತ್ತ ಸಚಿವರಿಗೆ ಹೆಚ್ಚುವರಿಯಾಗಿ ವಹಿಸುವ ನಿರೀಕ್ಷೆಯಿದೆ. ಇದೀಗ ಸಾಗುತ್ತಿರುವ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬಳಿಕ ಪೂರ್ಣ ಪ್ರಮಾಣದ ಬದಲಾವಣೆಯ ಸಾಧ್ಯತೆಯಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಉತ್ತರಪ್ರದೇಶದಲ್ಲಿ ಅಭೂತಪೂರ್ವ ಜಯ ಸಾಧಿಸಿದ ಬಳಿಕ ಪಕ್ಷದ ಮೇಲೆ ಮತ್ತು ಸರಕಾರದ ಮೇಲೆ ಪ್ರಧಾನಿಯ ಹಿಡಿತ ಬಿಗಿಗೊಂಡಿದೆ. ರಾಜ್ಯದಿಂದ ಪ್ರಭಾವೀ ಮುಖ್ಯಮಂತ್ರಿಗಳನ್ನು ಕೇಂದ್ರ ಸಂಪುಟಕ್ಕೆ ಕರೆಸಿಕೊಂಡರೂ ಯಾರೂ ಪ್ರಶ್ನಿಸಲಾಗದ ಸ್ಥಿತಿ ಇದೆ ಎಂದು ಬಿಜೆಪಿಯ ಹಿರಿಯ ಪದಾಧಿಕಾರಿಯೋರ್ವರು ಹೇಳಿದ್ದಾರೆ.