ಪರಿಕ್ಕರ್ ಸಿಎಂ ಆಗಿ ಪದಗ್ರಹಣ ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿ ನಾಳೆ ಸುಪ್ರೀಂನಲ್ಲಿ ವಿಚಾರಣೆ
Update: 2017-03-13 20:46 IST
ಹೊಸದಿಲ್ಲಿ, ಮಾ.13: ಮನೋಹರ್ ಪರಿಕ್ಕರ್ ಗೋವಾ ಮುಖ್ಯ ಮಂತ್ರಿಯಾಗುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ.
ಕೇಂದ್ರ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪರಿಕ್ಕರ್ ಗೋವಾದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಮನೋಹರ್ ಪರಿಕ್ಕರ್ ಅವರಿಗೆ ಸರಕಾರ ರಚನೆಗೆ ಆಹ್ವಾನಿಸಿದ ರಾಜ್ಯಪಾಲ ಮೃದುಲಾ ಸಿನ್ಹಾ ಧೋರಣೆ ಕಾನೂನುಬಾಹಿರ ಎಂದು ಆರೋಪಿಸಿದ್ದ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಅರ್ಜಿಯ ತುರ್ತು ವಿಚಾರಣೆಯನ್ನು ಮಂಗಳವಾರಕ್ಕೆ ನಿಗದಿಪಡಿಸಿದೆ. ಏಕೈಕ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಗೆ ಸರಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ಅಪಾದಿಸಿ ಸುಪ್ರೀಂಗೆ ತಕರಾರು ಅರ್ಜಿ ಸಲ್ಲಿಸಿದೆ.