×
Ad

ಜೆಎನ್‌ಯು ವಿದ್ಯಾರ್ಥಿ ನಿಗೂಢ ಸಾವು: ಸಿಬಿಐ ತನಿಖೆಗೆ ಆಗ್ರಹ

Update: 2017-03-15 08:39 IST

ಹೊಸದಿಲ್ಲಿ, ಮಾ.15: ಜವಾಹರಲಾಲ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಮುತ್ತುಕೃಷ್ಣನ್ ಅವರ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಮೃತವ್ಯಕ್ತಿಯ ತಂದೆ ಆಗ್ರಹಿಸಿದ್ದಾರೆ.

ಮುತ್ತುಕೃಷ್ಣನ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಎಐಐಎಂಎಸ್‌ನಲ್ಲಿ ಅಪಾರ ಸಂಖ್ಯೆಯ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು, ಶಿಕ್ಷಕರು ಸೇರಿದ್ದರು. ಆವರಣದ ಹೊರಗೆ ಸೇರಿದ್ದ ಮೃತ ವಿದ್ಯಾರ್ಥಿಯ ತಂದೆ ಜೀವನಂದಮ್ ಅವರು, "ಆತ ತುಂಬಾ ಸಾಹಸಿ. ಅಂಥ ಹೆಜ್ಜೆಯನ್ನು ಆತ ಇಡಲು ಸಾಧ್ಯವೇ ಇಲ್ಲ. ಈ ಸಾವಿನ ಹಿಂದೆ ದೊಡ್ಡ ಸಂಚು ಇದೆ" ಎಂದು ಹೇಳಿದ್ದಾರೆ.

ಆತನಿಗೆ ನಿರಂತರವಾಗಿ ಜಾತಿ ಆಧರಿತ ತಾರತಮ್ಯ ನೀಡಲಾಗುತಿತ್ತು ಎಂದು ಆತನ ಸ್ನೇಹಿತರಿಂದ ತಿಳಿದುಬಂದಿದೆ. ಶೈಕ್ಷಣಿಕವಾಗಿಯೂ ಆತ ಹಲವು ತಾರತಮ್ಯಕ್ಕೆ ಒಳಗಾಗಿದ್ದ. ಈ ಎಲ್ಲ ಅಂಶಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಿಗೂಢ ಸಾವಿನ ಘಟನೆ ಬಗ್ಗೆ ವಿಸ್ತತ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಭಾರತೀಯ ದಂಡಸಂಹಿತೆಯ ಸೂಕ್ತ ಕಲಂಗಳ ಅನ್ವಯ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲು ಕೋರಿದ್ದಾಗಿ ವಿವರಿಸಿದ್ದಾರೆ.

ಸೇಲಂ ಮೂಲದ ಮುತ್ತುಕೃಷ್ಣನ್ ಅವರ ಆತ್ಮಹತ್ಯೆ ಟಿಪ್ಪಣಿ ಕೂಡಾ ಇದುವರೆಗೆ ಪತ್ತೆಯಾಗದಿರುವುದು ಅವರ ಸಾವಿನ ಸುತ್ತ ಎದ್ದಿರುವ ಸಂಶಯಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News