ಸಿಯಾಚಿನ್ ನಿಂದ ಮರಳಿದ ಯೋಧ ಮೊದಲು ಹೋಗಿದ್ದು ರಿಸರ್ವ್ ಬ್ಯಾಂಕಿಗೆ ...
ಹೊಸದಿಲ್ಲಿ, ಮಾ.15: ನೋಟು ಅಮಾನ್ಯೀಕರಣದಿಂದಾಗಿ ದೇಶ ಕಾಯುವ ಹಲವು ಯೋಧರು ಪಡಬಾರದ ಬವಣೆ ಪಡುತ್ತಿವುದು ಈಗ ಬೆಳಕಿಗೆ ಬರುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣದ ಘೋಷಣೆ ಮಾಡಿದ ಸಂದರ್ಭ ಸಿಯಾಚಿನ್ ನಲ್ಲಿ 20,000 ಅಡಿ ಎತ್ತರದ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ 30 ವರ್ಷದ ಮಹೇಂದ್ರ ಸಿಂಗ್ ಎಂಬ ಯೋಧ ಈ ತಿಂಗಳು 10 ದಿನಗಳ ರಜೆ ಹಾಕಿ ರಾಜಸ್ಥಾನದಲ್ಲಿದ್ದ ತಮ್ಮ ಮನೆಗೆ ಮರಳಿದ್ದರು. ಅಲ್ಲಿ ಹೆಚ್ಚು ಕಾಲ ನಿಲ್ಲದೆ ನೇರವಾಗಿ ದೆಹಲಿಯಲ್ಲಿರುವ ಆರ್ ಬಿ ಐ ಮುಖ್ಯ ಕಚೇರಿಗೆ ಬಂದು ತಮ್ಮಲ್ಲಿರುವ ಅಮಾನ್ಯಗೊಂಡಿರುವ 6,000 ರೂಪಾಯಿ ನೋಟುಗಳ ಬದಲಿಗೆ ಹೊಸ ನೋಟುಗಳನ್ನು ನೀಡುವಂತೆ ಕೋರಿದ್ದರೂ ಅವರ ವಿನಂತಿಯನ್ನು ತಿರಸ್ಕರಿಸಲಾಗಿದೆ.
ಹಳೆ ನೋಟುಗಳ ವಿನಿಮಯಕ್ಕೆ ಮಾರ್ಚ್ 31 ಕೊನೆಯ ದಿನಾಂಕವೆಂದು ಸಿಂಗ್ ತಿಳಿದಿದ್ದರು. ಆದರೆ ಅದು ಅನಿವಾಸಿ ಭಾರತೀಯರಿಗೆ ನೋಟು ವಿನಿಮಯ ಮಾಡಲು ಕೊನೆಯ ದಿನಾಂಕವೆಂದು ಅವರಿಗೆ ತಿಳಿದಿರಲಿಲ್ಲ. ತಾವು ಸಿಯಾಚಿನ್ ನಲ್ಲಿ ಕರ್ತವ್ಯದಲ್ಲಿದ್ದುದರಿಂದ ತಮ್ಮಲ್ಲಿರುವ ಹಳೆಯ ನೋಟುಗಳನ್ನು ನಿಗದಿತ ಸಮಯದಲ್ಲಿ ವಿನಿಮಯ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಪುರಾವೆ ಸಮೇತ ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಹೀಗಾಗುವುದೆಂದು ತಿಳಿದಿದ್ದರೆ ತಾನು ಬಸ್ಸು ಪ್ರಯಾಣಕ್ಕೆ 1,000 ರೂ. ಸುರಿದು ಇಲ್ಲಿಯ ತನಕ ಬರುತ್ತಲೇ ಇರಲಿಲ್ಲ ಎಂದು ಅವರು ಅಲವತ್ತುಕೊಳ್ಳುತ್ತಿದ್ದಾರೆ.
ಮಹೇಂದ್ರ ಸಿಂಗ್ ಅವರಂತೆಯೇ ಪಂಕಜ್ ಸಿಂಗ್ ಎಂಬ ಸಿ ಆರ್ ಪಿ ಎಫ್ ಯೋಧ ಕೂಡ ತಮ್ಮಲ್ಲಿದ್ದ ರೂ 19000 ಬೆಲೆಯ ಹಳೆ ನೋಟುಗಳನ್ನು ವಿನಿಮಯ ಮಾಡಲು ಬಂದಿದ್ದರೂ ನಿರಾಸೆ ಅವರಿಗೆ ಕಾದಿತ್ತು. ನೋಟು ಅಮಾನ್ಯಗೊಂಡ ಸಮಯದಲ್ಲಿ ಅವರು ಮಾವೋವಾದಿಗಳಿಂದ ತೊಂದರೆಗೊಳಗಾದ ಜಾರ್ಖಂಡ್ ನ ಒಂದು ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದು ಅಲ್ಲಿ ಯಾವುದೇ ಸಂಪರ್ಕ ಮಾಧ್ಯಮಗಳು ಲಭ್ಯವಾಗಿಲ್ಲದೇ ಇದ್ದುದನ್ನು ವಿವರಿಸುತ್ತಾರೆ.
ಇನ್ನೊಬ್ಬ ಸಿ ಆರ್ ಪಿ ಎಫ್ ಯೋಧ ರಾಜೇಶ್ ಕೂಡ ತಮ್ಮಲ್ಲಿರುವ ಹಳೆ ನೋಟುಗಳನ್ನು ವಿನಿಮಯ ಮಾಡಲು ರಿಸರ್ವ್ ಬ್ಯಾಂಕ್ ಮುಖ್ಯ ಕಾರ್ಯಾಲಯಕ್ಕೆ ಬಂದಿದ್ದರೂ ಅವರ ಮನವಿಗೆ ಬೆಲೆಯೇ ಇರಲಿಲ್ಲ. ತಮ್ಮ ಪತ್ನಿಗೆ ಈಗಾಗಲೇ ಎರಡು ಬಾರಿ ಗರ್ಭಪಾತವುಂಟಾಗಿದ್ದರಿಂದ ಸಾಕಷ್ಟು ನೊಂದಿರುವ ರಾಜೇಶ್ ಇದೀಗ ಯೋಧರ ಸಂಕಷ್ಟಕ್ಕೆ ಆರ್ ಬಿ ಐ ತೋರಿಸಿರುವ ಅನಾಸ್ಥೆಯಿಂದ ಕಂಗೆಟ್ಟಿದ್ದಾರೆ.