×
Ad

ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ

Update: 2017-03-15 12:15 IST

ಹೊಸದಿಲ್ಲಿ, ಮಾ.15: ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ನಾಯಕತ್ವ ಸೂಚಿಸಿದೆ. ಈಗಾಗಲೇ ಈ ಹುದ್ದೆಯಲ್ಲಿ ಮೂರು ವರ್ಷಗಳ ತಮ್ಮ ಅವಧಿಯನ್ನು ಪೂರೈಸಿರುವ ಕೆ.ವಿ. ಥಾಮಸ್ ತೆರವುಗೊಳಿಸಲಿರುವ ಸ್ಥಾನವನ್ನು ಖರ್ಗೆ ತುಂಬಲಿದ್ದಾರೆ.

ಮಂಗಳವಾರ ಸಭೆ ಸೇರಿದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರು ಖರ್ಗೆ ಹೆಸರನ್ನು ಸಮಿತಿಯ ಅಧ್ಯಕ್ಷತೆಗೆ ಸೂಚಿಸಿದ್ದರು. ಈ ಹುದ್ದೆ ಸಾಂಪ್ರದಾಯಿಕವಾಗಿ ಮುಖ್ಯ ವಿಪಕ್ಷ ನಾಯಕನಿಗೇ ಹೋಗುತ್ತದೆ.

ಹಾಲಿ ಕಾಂಗ್ರೆಸ್ ಸದನ ನಾಯಕರಾಗಿರುವ ಖರ್ಗೆ ಅವರಿಗೆ ವಿಪಕ್ಷ ನಾಯಕನ ಸ್ಥಾನಮಾನವಿಲ್ಲದೇ ಹೋದರೂ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾದಾಗ ಕ್ಯಾಬಿನೆಟ್ ಶ್ರೇಣಿಯ ಎಲ್ಲಾ ಅರ್ಹತೆಗಳನ್ನು ಹೊಂದುತ್ತಾರಲ್ಲದೆ ಪಾರ್ಲಿಮೆಂಟ್ ಹೌಸ್ ನ ಕಚೇರಿಯೊಂದನ್ನೂ ಪಡೆಯುತ್ತಾರೆ. ಈ ಹುದ್ದೆಯ ಜತೆಗೆ ಕಾಂಗ್ರೆಸ್ ಪಕ್ಷದ ಸದನ ನಾಯಕರಾಗಿ ಅವರು ಮುಂದುವರಿಯಲಿದ್ದಾರೆ.

ಕರ್ನಾಟಕದ ಹಿರಿಯ ದಲಿತ ನಾಯಕರೂ ಆಗಿರುವ ಖರ್ಗೆ ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ರೈಲ್ವೇ ಸಚಿವರೂ ಆಗಿದ್ದರು.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿರುವ ಥಾಮಸ್ ಅವರು ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗುವ ಸಂಭಾವ್ಯತೆಯಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News