‘ಪದ್ಮಾವತಿ’ ಸೆಟ್ ಧ್ವಂಸ,ವೇಷಭೂಷಣಗಳಿಗೆ ಬೆಂಕಿ
ಕೊಲ್ಲಾಪುರ,ಮಾ.15: ಜಿಲ್ಲೆಯ ಮಾಸೈ ಪತ್ಥರ್ ಎಂಬಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂಜಯ ಲೀಲಾ ಬನ್ಸಾಲಿಯವರ ‘ಪದ್ಮಾವತಿ’ ಚಿತ್ರದ ಸೆಟ್ ಅನ್ನು ಬುಧವಾರ ಬೆಳಗಿನ ಜಾವ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಸೆಟ್‌ನಲ್ಲಿರಿಸಲಾಗಿದ್ದ ವೇಷಭೂಷಣಗಳು ಮತ್ತು ಪ್ರಾಣಿಗಳ ಆಹಾರಕ್ಕೂ ಬೆಂಕಿ ಹಚ್ಚಲಾಗಿದೆ.
ಬುಧವಾರ ನಸುಕಿನ 1ರಿಂದ 2 ಗಂಟೆಯ ನಡುವೆ ಸುಮಾರು 15-20 ಜನರಿದ್ದ ಗುಂಪು ಈ ಕೃತ್ಯವೆಸಗಿದೆ ಎಂದು ಪೊಲೀಸರು ತಿಳಿಸಿದರು.
ಚಿತ್ರತಂಡದ ಸದಸ್ಯರು ಇಬ್ಬರು ದುಷ್ಕರ್ಮಿಗಳನ್ನು ಹಿಡಿದಿದ್ದರಾದರೂ ಇತರ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದು, ಬಳಿಕ ಎಲ್ಲರೂ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಧನ್ಯಕುಮಾರ ಗೋಡ್ಸೆ ಹೇಳಿದರು.
ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಚಿತ್ರತಂಡದ ವಾಹನಗಳಿಗೂ ಬೆಂಕಿ ಹಚ್ಚಲು ದುಷ್ಕರ್ಮಿಗಳು ಪ್ರಯತ್ನಿಸಿದ್ದರು. ಈ ಘಟನೆಗೆ ಕಾರಣವಿನ್ನೂ ಗೊತ್ತಾಗಿಲ್ಲ ಎಂದರು. ದೀಪಿಕಾ ಪಡುಕೋಣೆ ನಾಯಕಿಯಾಗಿರುವ ‘ಪದ್ಮಾವತಿ’ ಚಿತ್ರತಂಡದ ಪಾಲಿಗೆ ಇದು ಎರಡನೇ ಕಹಿಘಟನೆಯಾಗಿದೆ. ಕಳೆದ ಜನವರಿಯಲ್ಲಿ ರಾಜಸ್ಥಾನದ ಜೈಪುರದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದಾಗ ‘ಕರ್ಣಿ ಸೇನಾ’ ಹೆಸರಿನ ರಜಪೂತ ಸಮುದಾಯದ ಸಂಘಟನೆಯ ಕಾರ್ಯಕರ್ತರು ಚಿತ್ರದ ಕಥೆಯನ್ನು ತಿರುಚಲಾಗಿದೆ ಎಂದು ಆರೋಪಿಸಿ ಬನ್ಸಾಲಿಯವರ ಮೇಲೆ ಹಲ್ಲೆ ನಡೆಸಿದ್ದರು.
ಚಿತ್ರದಲ್ಲಿ ದೀಪಿಕಾ ರಾಣಿ ಪದ್ಮಾವತಿಯ ಪಾತ್ರ ನಿರ್ವಹಿಸುತ್ತಿದ್ದರೆ, ರಣವೀರ ಸಿಂಗ್ ಅಲ್ಲಾವುದೀನ ಖಿಲ್ಜಿಯಾಗಿ ಮತ್ತು ಶಾಹಿದ್ ಕಪೂರ್ ರಾಜಾ ರತನ್ ಸಿಂಗ್ ಆಗಿ ಅಭಿನಯಿಸುತ್ತಿದ್ದಾರೆ.