×
Ad

ಸರಕಾರ ರಚನೆಯಲ್ಲಿ ನಾಯಕತ್ವದ ವೈಫಲ್ಯ ಖಂಡಿಸಿ ಗೋವಾ ಕಾಂಗ್ರೆಸ್ ಶಾಸಕ ರಾಜೀನಾಮೆ

Update: 2017-03-16 18:17 IST

ಪಣಜಿ,ಮಾ.16: ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಪಕ್ಷವು ಸ್ಪಷ್ಟವಾಗಿ ಸರಕಾರವನ್ನು ರಚಿಸುವ ಸ್ಥಿತಿಯಲ್ಲಿದ್ದರೂ ಹಾಗೆ ಮಾಡುವಲ್ಲಿ ಉನ್ನತ ನಾಯಕತ್ವವು ವಿಫಲಗೊಂಡಿದೆ ಎಂದು ಗುರುವಾರ ಆರೋಪಿಸಿದ ಕಾಂಗ್ರೆಸ್ ಶಾಸಕ ವಿಶ್ವಜಿತ್ ರಾಣೆ ಅವರು ಪಕ್ಷಕ್ಕೆ ಮತ್ತು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ವಿಧಾನಸಭೆಯ 40 ಸ್ಥಾನಗಳ ಪೈಕಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಏಕೈಕ ಅತಿ ದೊಡ್ಡಪಕ್ಷವಾಗಿ ಮೂಡಿಬಂದಿತ್ತು.

 ಸುದ್ದಿಗಾರರೊಂದಿಗೆ ಮಾತನಾಡಿದ ರಾಣೆ, ಕಾಂಗ್ರೆಸ್ ನಾಯಕತ್ವವು ಇಲ್ಲಿಯ ವ್ಯವಹಾರಗಳನ್ನು ನಿರ್ವಹಿಸಿದ ರೀತಿಯು ಪಕ್ಷದ ಈ ಸ್ಥಿತಿಗೆ ಕಾರಣವಾಗಿದೆ. ತಾನು ಕಾಂಗ್ರೆಸ್‌ನಿಂದ ಏನೂ ನಿರೀಕ್ಷಿಸುತ್ತಿಲ್ಲ. ಅವರು ಗೋವಾದ ಜನತೆಯ ನಂಬಿಕೆಯನ್ನು ನುಚ್ಚುನೂರುಗೊಳಿಸಿದ್ದಾರೆ ಎಂದರು. ಹಂಗಾಮಿ ಸ್ಪೀಕರ್ ಸಿದ್ಧಾರ್ಥ ಕಂಕಳಿಕರ್ ಅವರಿಗೆ ತನ್ನ ರಾಜೀನಾಮೆಯನ್ನು ಸಲ್ಲಿಸಿರುವ ರಾಣೆ, ತಾನು ಮತ್ತೊಮ್ಮೆ ವಾಳ್ಪೊಯಿಯಿಂದ ಸ್ಪರ್ಧಿಸುವುದಾಗಿ ತಿಳಿಸಿದರು.

ಗುರುವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರು ವಿಶ್ವಾಸ ಮತ ಗಳಿಸಿದ ಸಂದರ್ಭ ರಾಣೆ ಸದನದಲ್ಲಿರಲಿಲ್ಲ. ಹಂಗಾಮಿ ಸ್ಪೀಕರ್‌ರಿಂದ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧನೆಯ ಬಳಿಕ ಅವರು ಸದನದಿಂದ ನಿರ್ಗಮಿಸಿದ್ದರು.

 ರಾಣೆ ರಾಜೀನಾಮೆಯಿಂದ ಸದನದಲ್ಲಿ ಕಾಂಗ್ರೆಸ್‌ನ ಬಲ 17ರಿಂದ 16ಕ್ಕೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News