ದಿಲ್ಲಿ ದರ್ಗಾದ ಧರ್ಮಗುರು ಪಾಕಿಸ್ತಾನದಲ್ಲಿ ನಿಗೂಢ ನಾಪತ್ತೆ
ಹೊಸದಿಲ್ಲಿ, ಮಾ.16: ದಿಲ್ಲಿಯಲ್ಲಿನ ಸೂಫಿ ಶ್ರದ್ಧಾಕೇಂದ್ರ ನಿಝಾಮುದ್ದೀನ್ ದರ್ಗಾದ ಮುಖ್ಯ ಧರ್ಮಗುರು ಆಸಿಫ್ ಆಲಿ ನಿಝಾಮಿ (80) ಅವರು ಪಾಕಿಸ್ತಾನದಲ್ಲಿ ಕಾಣೆಯಾಗಿದ್ದಾರೆ.
ಅವರು ಕೊನೆಯ ಬಾರಿ ಬುಧವಾರ ಲಾಹೋರ್ ವಿಮಾನ ನಿಲ್ದಾಣದಲ್ಲಿ ಕಂಡು ಬಂದಿದ್ದು, ಆನಂತರ ನಾಪತ್ತೆಯಾಗಿದ್ದಾರೆ.
ಮಾ.6ರಂದು ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ವಿಮಾನದ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ನಿಝಾಮಿ ಕರಾಚಿಯಲ್ಲಿರುವ ತನ್ನ ಸೋದರಿಯ ನಿವಾಸದಲ್ಲಿ ಉಳಿದುಕೊಂಡಿದ್ದರು. 13ರಂದು ಲಾಹೋರಿಗೆ ಪ್ರಯಾಣಿಸಿ ಸೂಫಿ ಸಂತ ಬಾಬಾ ಫರೀದ್‌ರ ದರ್ಗಾದಲ್ಲಿ ಚಾದರ್ ಅರ್ಪಿಸಿದ್ದ ಅವರು 14ರಂದು ಇನ್ನೊಂದು ದರ್ಗಾಕ್ಕೆ ತೆರಳಿದ್ದರು.
ಆದರೆ ಅವರು ಲಾಹೋರ್‌ನಿಂದ ಕರಾಚಿಗೆ ಮರಳಿಲ್ಲ. ಲಾಹೋರ್ ವಿಮಾನ ನಿಲ್ದಾಣದಲ್ಲಿ ಕೊನೆಯ ಬಾರಿ ಕಂಡು ಬಂದಿದ್ದ ಅವರು ಅಲ್ಲಿಂದ ಹೊರಗೆ ಬಂದಿರ ಲಿಲ್ಲ. ಬುಧವಾರ ಸಂಜೆ 4:25ರಿಂದ ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ.
ನಿಝಾಮಿಯವರ ಕುಟುಂಬ ವರ್ಗ ನೆರವಿಗಾಗಿ ಇಲ್ಲಿಯ ಪಾಕಿಸ್ತಾನ ರಾಯಭಾರಿ ಕಚೇರಿಯ ಜೊತೆಗೆ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನೂ ಸಂಪರ್ಕಿಸಿದೆ. ನಿಗದಿತ ಕಾರ್ಯಕ್ರಮದಂತೆ ನಿಝಾಮಿ ಮಾ.20ರಂದು ಭಾರತಕ್ಕೆ ಮರಳಬೇಕಾಗಿತ್ತು.