ವಾರಂಟ್ ಜಾರಿಗೆ 100 ಪೊಲೀಸರ ತಂಡದೊಂದಿಗೆ ನ್ಯಾ.ಕರ್ಣನ್ ಮನೆಗೆ ಬಂದ ಪೊಲೀಸ್ ಮುಖ್ಯಸ್ಥರು
ಕೋಲ್ಕತ್ತಾ, ಮಾ.17: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ವಾರಂಟ್ ಜಾರಿಗೊಳಿಸಲು ಕೋಲ್ಕತಾ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್.ಕರ್ಣನ್ ಅವರ ಮನೆಗೆ ಪ.ಬಂಗಾಲ ಪೊಲೀಸ್ ಪಡೆಯ ಮುಖ್ಯಸ್ಥರು ಸುಮಾರು 100 ಸಿಬ್ಬಂದಿಗಳ ಜೊತೆ ಆಗಮಿಸಿದ ಘಟನೆ ನಡೆದಿದೆ.
ನ್ಯಾಯಾಧೀಶ ಕರ್ಣನ್ ಅವರಿಗೆ ವೈಯಕ್ತಿಕವಾಗಿ ವಾರಂಟ್ ತಲುಪಿಸಬೇಕೆಂದು ಕಳೆದ ವಾರ ಸುಪ್ರೀಂಕೋರ್ಟ್ ಬಂಗಾಳ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಅದೇ ದಿನ ತನ್ನ ಮನೆಯಂಗಳದಲ್ಲೇ ‘ನ್ಯಾಯಾಲಯದ ಕಲಾಪ’ ನಡೆಸಿದ್ದ ಕರ್ಣನ್, ತನ್ನ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿರುವ ಸುಪ್ರೀಂಕೋರ್ಟ್‌ನ ಏಳು ನ್ಯಾಯಾಧೀಶರ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಿದ್ದರು.
ತನ್ನ ವಿರುದ್ಧ ಜಾರಿಗೊಳಿಸಲಾಗಿರುವ ವಾರಂಟನ್ನು ತಿರಸ್ಕರಿಸಿರುವ ನ್ಯಾಯಾಧೀಶ ಕರ್ಣನ್, ತನ್ನ ಮನಸ್ಸಿನ ಶಾಂತಿಯನ್ನು ಕದಡಿ ಸಾಮಾಜಿಕ ಜೀವನಕ್ಕೆ ತೊಂದರೆ ಉಂಟು ಮಾಡಿರುವ ನ್ಯಾಯಾಧೀಶರು ತನಗೆ 14 ಕೋಟಿ.ರೂ. ಮೊತ್ತದ ಪರಿಹಾರ ನೀಡಬೇಕೆಂದು ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ತಾನೋರ್ವ ದಲಿತನಾಗಿರುವ ಕಾರಣ ತನ್ನನ್ನು ‘ಟಾರ್ಗೆಟ್’ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕರ್ಣನ್, ಮಾರ್ಚ್ 31ರಂದು ಕೋರ್ಟ್ ಎದುರು ಹಾಜರಾಗುವಂತೆ ಆದೇಶ ನೀಡಿರುವ ಏಳು ನ್ಯಾಯಾಧೀಶರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ತನ್ನ ವಿರುದ್ಧ ಜಾರಿಯಾಗಿರುವ ವಾರಂಟನ್ನು ರಾಷ್ಟ್ರಪತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿರುವ ಅವರು, ಎಲ್ಲಾ ಏಳು ಮಂದಿ ನ್ಯಾಯಾಧೀಶರೂ ರಾಜೀನಾಮೆ ನೀಡಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದಿದ್ದಾರೆ.
ನ್ಯಾಯಾಂಗ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದ ನ್ಯಾಯಮೂರ್ತಿ ಕರ್ಣನ್, ದೇಶದ ಮಾಜಿ ಮತ್ತು ಹಾಲಿ ನ್ಯಾಯಾಧೀಶರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿಗೆ ಪತ್ರವನ್ನೂ ಬರೆದಿದ್ದರು.
ಕರ್ಣನ್ ಸಾರ್ವಜನಿಕವಾಗಿ ಆರೋಪ ಮುಂದುವರಿಸಿದಾಗ ಅವರ ನ್ಯಾಯಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಯನ್ನು ಕಿತ್ತುಕೊಂಡಿದ್ದ ಸುಪ್ರೀಂಕೋರ್ಟ್, ಅವರನ್ನು ಮದ್ರಾಸ್ ಹೈಕೋರ್ಟ್‌ನಿಂದ ಕೋಲ್ಕತಾ ಹೈಕೋರ್ಟ್‌ಗೆ ವರ್ಗಾಯಿಸಿತ್ತು. ಆದರೆ ಕೋರ್ಟ್‌ಗೆ ಹಾಜರಾಗುವ ಬದಲು, ದಲಿತ ಎಂಬ ಕಾರಣದಿಂದ ತನ್ನನ್ನು ‘ಟಾರ್ಗೆಟ್’ ಮಾಡಲಾಗುತ್ತಿದೆ ಎಂದು ಆರೋಪಿಸಿ ನ್ಯಾಯಾಧೀಶರಿಗೆ ಪತ್ರ ಬರೆದಿದ್ದ ಕರ್ಣನ್, ವರ್ಗಾವಣೆ ಆದೇಶಕ್ಕೆ ತಾನೇ ತಡೆಯಾಜ್ಞೆ ಜಾರಿಗೊಳಿಸಿದ್ದರು.
ನ್ಯಾಯಾಧೀಶ ಕರ್ಣನ್ ಅವರ ಸ್ವೇಚ್ಛಾಧಿಕಾರದ ವರ್ತನೆಯ ಕುರಿತು ಮದ್ರಾಸ್ ಹೈಕೋರ್ಟ್‌ನ ಸುಮಾರು 20 ನ್ಯಾಯಾಧೀಶರು ಅಹವಾಲು ಸಲ್ಲಿಸಿದ್ದರು.