ತನಿಖೆ ಕಾರ್ಯ ಚುರುಕುಗೊಳಿಸಲು ಹೈಕೋರ್ಟ್ ಸೂಚನೆ
ಹೊಸದಿಲ್ಲಿ, ಮಾ.17: ನಾಪತ್ತೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಅವರನ್ನು ಪತ್ತೆಹಚ್ಚಲು ಪೊಲೀಸರು ನಡೆಸಿದ ಕಾರ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದಿಲ್ಲಿ ಹೈಕೋರ್ಟ್, ವಿದ್ಯಾರ್ಥಿಯನ್ನು ಪತ್ತೆ ಹಚ್ಚುವಂತೆ ಆದೇಶಿಸಿದೆ.
ಕಾಗದ ಪತ್ರಗಳ ಪರಿಶೀಲನೆ ಬಿಟ್ಟರೆ ಬೇರೆ ಯಾವುದೇ ಕೆಲಸವಾಗಿಲ್ಲ. ಕೇವಲ ಸಮಯ ಮತ್ತು ಹಣವನ್ನು ಪೋಲು ಮಾಡಲಾಗಿದೆ ಅಷ್ಟೇ. ನಿಮ್ಮ ತನಿಖಾಧಿಕಾರಿ ವ್ಯರ್ಥವಾಗಿ ಸಮಯ ಕಳೆಯುತ್ತಿದ್ದಾರೆ. ದಿಲ್ಲಿ-ಬರೇಲಿ- ಹರಿದ್ವಾರ್ ಮಾರ್ಗದಲ್ಲಿರುವ ಆಸ್ಪತ್ರೆಗಳು, ಪೊಲೀಸ್ ಠಾಣೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸಲು ಕಳಿಸುವ ಮೂಲಕ ನೀವು ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದ್ದೀರಿ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಕಳೆದ ವರ್ಷದ ಅಕ್ಟೋಬರ್ 15ರಿಂದ ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಪತ್ತೆ ಹಚ್ಚಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಿ. ವಿದ್ಯಾರ್ಥಿ ಬದುಕಿಲ್ಲ ಎಂದಾದರೆ ಅದನ್ನು ತಿಳಿಸಿ. ನಮಗೆ ಉತ್ತರ ಸಿಗಬೇಕು ಎಂದು ನ್ಯಾಯಮೂರ್ತಿ ಜಿ.ಎಸ್.ಸೈನಿ ಮತ್ತು ವಿನೋದ್ ಗೋಯೆಲ್ ಅವರನ್ನೊಳಗೊಂಡ ಪೀಠವೊಂದು ಪೊಲೀಸ್ ಅಧಿಕಾರಿ ರಾಮಗೋಪಾಲ್ ನಾಕ್ ಅವರಿಗೆ ಸೂಚಿಸಿತು. ನಜೀಬ್ ನಾಪತ್ತೆ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕಿತ 9 ವಿದ್ಯಾರ್ಥಿಗಳ ಮೊಬೈಲ್ ಕರೆಗಳ ವಿವರವನ್ನು ನೀಡುವಂತೆ ದಿಲ್ಲಿ ಪೊಲೀಸರಿಗೆ ಸೂಚಿಸಿತು ಹಾಗೂ ನಜೀಬ್ ತಾಯಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಮಾರ್ಚ್ 31ಕ್ಕೆ ನಿಗದಿಗೊಳಿಸಿತು. ದಿಲ್ಲಿ ಪೊಲೀಸರು ನಜೀಬ್ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಮತ್ತು ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ನಜೀಬ್ ತಾಯಿಯ ಪರ ವಕೀಲರಾದ ಪಲ್ಲವಿ ಶರ್ಮ ನ್ಯಾಯಾಲಯಕ್ಕೆ ತಿಳಿಸಿದ್ದರು. ಅಲ್ಲದೆ ಪ್ರಕರಣದಲ್ಲಿ ಶಂಕಿತ ಒಂಬತ್ತು ವಿದ್ಯಾರ್ಥಿಗಳನ್ನು ರಕ್ಷಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.