ಲಂಚ ನೀಡದ್ದಕ್ಕೆ ಶಿಕ್ಷೆ , ಮಕ್ಕಳ ಮೂರು ಚಕ್ರದ ಸೈಕಲ್ಲೇ ಈ ರೋಗಿಗೆ ವೀಲ್ ಚೇರ್ !

Update: 2017-03-17 18:03 GMT

ಹೈದರಾಬಾದ್ , ಮಾ. 17 : ಲಂಚ ನೀಡಲು ಸಾಧ್ಯವಾಗದ ರೋಗಿಯೊಬ್ಬ ಮಕ್ಕಳ ಮೂರು ಚಕ್ರದ ಸೈಕಲ್ ಬಳಸಿ ಓಡಾಡಿದ ಆಘಾತಕಾರಿ ಘಟನೆ ಇಲ್ಲಿನ ಸರ್ಕಾರಿ ಗಾಂಧಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಬಗ್ಗೆ ತನಿಖೆಗೆ ಸಮಿತಿಯನ್ನು ರಚಿಸಲಾಗಿದೆ. 


ಕಳೆದ ಆಗಸ್ಟ್ ನಲ್ಲಿ ಸುಟ್ಟ ಗಾಯಗಳಾದ ಮೇಲೆ ಚಿಕಿತ್ಸೆಗೆ ಆಗಾಗ 40 ವರ್ಷದ ರಾಜು ಬರುತ್ತಿದ್ದರು.  ಆದರೆ ಅವರಿಗೆ ಲಂಚ ನೀಡಲು ಸಾಧ್ಯವಾಗಿಲ್ಲದ್ದರಿಂದ ವೀಲ್ ಚೇರ್ ನೀಡಿರಲಿಲ್ಲ ಎಂದು ಆತನ ಪತ್ನಿ ಸಂತೋಷಿ ದೂರಿದ್ದಾರೆ .   ಓಡಾಡಲು ತೀವ್ರ ಸಮಸ್ಯೆ ಎದುರಿಸುತ್ತಿರುವ ಈ ರೋಗಿ ಪ್ರತಿಬಾರಿ ಆಸ್ಪತ್ರೆಗೆ ಭೇಟಿ ನೀಡುವಾಗ ಈತನ ಪತ್ನಿ ಮಕ್ಕಳ ಮೂರು ಚಕ್ರದ ಸೈಕಲ್ ತರುತ್ತಿದ್ದರು. 

ತನ್ನ ಪತಿಗೆ ಶಸ್ತ್ರಚಿಕಿತ್ಸೆ ಆಗಬೇಕಿದ್ದು ಎಂದು ಹೇಳಿದ್ದರೂ ವೈದ್ಯರು ಬೇರೆ ಬೇರೆ ನೆಪ ಒಡ್ಡಿ ಅದನ್ನು ಮುಂದೂಡುತ್ತಿದ್ದಾರೆ. ವಾರ್ಡ್ ಬಾಯ್ ಗಳು ವೀಲ್ ಚೇರ್ ಕೊಡಲು  100 - 200 ರೂ. ಲಂಚ ಕೇಳುತ್ತಾರೆ. ಐದಾರು ಬಾರಿ ನಾನು ಹಣ ಕೊಟ್ಟೆ. ಆದರೆ ಬುಧವಾರ ನನಗೆ ಕೊಡಲಾಗಲಿಲ್ಲ.  ಅದಕ್ಕಾಗಿ ನಾನು ಮಕ್ಕಳ ಮೂರು ಚಕ್ರದ ಸೈಕಲ್ ತರುತ್ತಿದ್ದೇನೆ ಎಂದು ಸಂತೋಷಿ ದೂರಿದ್ದಾರೆ.

ಮಾಧ್ಯಮ ವರದಿಗಳ ಆಧಾರದಲ್ಲಿ ತನಿಖೆಗೆ ಆದೇಶಿಸಲಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕ ಡಾ . ಮಂಜುಳಾ ಹೇಳಿದ್ದಾರೆ. ತೆಲಂಗಾಣದ ಸಚಿವ ಕೆ ಟಿ ರಾಮರಾವ್ ಅವರು ಘಟನೆಯ ಕುರಿತು ಕ್ರಮ ಕೈಗೊಂಡು, ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News